ವಿಶ್ವ ವಿಖ್ಯಾತಿ ಹೊಂದಿರುವ ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನಕ್ಕೆ ರಾಜ್ಯ, ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶಿಗರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಲ್ಲದೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರಣದಿಂದ ಸರ್ಕಾರಿ ಮತ್ತು ಇತರೇ ರಜಾ ದಿನಗಳಲ್ಲಿಯೂ ಕುಟುಂಬ ಸಮೇತರಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದೊಂದು ಪಾರಂಪರಿಕ ಸ್ಥಳವೂ ಆಗಿದೆ. ಆದರೆ ಕೆಲವು ದಿನಗಳ ಹಿಂದೆ ದೇವಾಲಯದ ಸನಿಹವೇ ನೂತನವಾಗಿ ಒಂದು ಕಟ್ಟಡ ಕಾಮಗಾರಿ ನಡೆಯುತ್ತಿರುವುದರಿಂದ, ಸಾಕಷ್ಟು ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ನಿರ್ಮಾಣ ಮಾಡುತ್ತಿರುವ ಕಟ್ಟಡದಿಂದ ದೇವಾಲಯದ ಪಾರಂಪರಿಕ ಗೋಪುರವೇ ಕಾಣದಂತೆ ಮರೆ ಮಾಡಲಾಗುತ್ತಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ನೂತನ ಕಟ್ಟಡ ಕಾಮಗಾರಿಯಿಂದ ದೇವಾಲಯದ ಐತಿಹಾಸಿಕ ಗೋಪುರದ ಅಸ್ತಿತ್ವಕ್ಕೆ ತೊಂದರೆ ಯಾಗಲಿದೆಯೆ? ಎಂಬ ಬಗ್ಗೆ ಸಂಬಂಧಪಟ್ಟವರು ಜನರಿಗೆ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ ಗೋಪುರಕ್ಕೆ ತೊಂದರೆಯಾಗುವುದಾದರೆ ಇದರ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕಿದೆ.
– ಬಿ.ಎಸ್.ಸಾಯಿ ಸಂದೇಶ್, ಮೈಸೂರು



