ನವರಾತ್ರಿ ಉತ್ಸವದ ಅಂಗವಾಗಿ ಮೈಸೂರಿನ ನಾನಾ ಭಾಗಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರಿಗೆ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ ಈ ಪಾಸ್‌ಗಳ ಪೈಕಿ ಬಹುತೇಕ ಪಾಸ್‌ಗಳನ್ನು ನಗರ ಭಾಗದವರೇ ಪಡೆದುಕೊಳ್ಳುತ್ತಿದ್ದು, ಗ್ರಾಮೀಣ ಭಾಗದವರಿಗೆ ಈ ಪಾಸ್‌ಗಳು ಎಲ್ಲಿ ಸಿಗುತ್ತವೆ? ಹೇಗೆ ಖರೀದಿಸಬೇಕು? ಎಂಬುದೇ ತಿಳಿಯುತ್ತಿಲ್ಲ. ಸರ್ಕಾರ ಪ್ರತಿ ಬಾರಿಯೂ ಇದು ಜನಸಾಮಾನ್ಯರ ದಸರಾವಾಗಬೇಕು ಎಂದು ಹೇಳಿಕೆಗಳನ್ನು ನೀಡುತ್ತಿದೆಯೇ ವಿನಾ ಈವರೆಗೂ ಜನಸಾಮಾನ್ಯರ ದಸರಾ ಆಗಿಲ್ಲ. ಯುವ ದಸರಾ, ಯುವ ಸಂಭ್ರಮ, ಜಂಬೂ ಸವಾರಿ, ಪಂಜಿನ ಕವಾಯತಿನಂತಹ ಪ್ರಮುಖ ಕಾರ್ಯಕ್ರಮಗಳ ಹೆಚ್ಚಿನ ಪಾಲು ಪಾಸ್‌ಗಳು ಜನಪ್ರತಿನಿಧಿಗಳ ಕೈ ಸೇರುತ್ತಿವೆ. ಇದರಿಂದಾಗಿ ದಸರಾ ಕಣ್ತುಂಬಿಕೊಳ್ಳಬೇಕು ಎಂದು ಬರುವ ಗ್ರಾಮೀಣ ಭಾಗದ ಜನರು ಪಾಸ್ ಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ದೂರದಿಂದ ನಿಂತು ನೋಡಿ ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಬಾರಿಯಾದರೂ ಜಿಲ್ಲಾಡಳಿತ ತಾಲ್ಲೂಕು ಮಟ್ಟದಲ್ಲಿಯೂ ದಸರಾ ಕಾರ್ಯಕ್ರಮಗಳ ಪಾಸ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.
-ವಿನೋದ್ ಕುಮಾರ್, ಕೊಡಸೀಗೆ, ಎಚ್.ಡಿ.ಕೋಟೆ ತಾ





