Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ: ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಿ

ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಅಂಚಿನಲ್ಲಿರುವ ಎಚ್‌.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲ್ಲೂಕುಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜೀವಹಾನಿಗಳಾಗುತ್ತಿವೆ. ಇತ್ತೀಚೆಗೆ ಎಚ್.ಡಿ. ಕೋಟೆ ಪಟ್ಟಣದ ಸಮೀಪರೆ 3-4 ಹುಲಿಗಳು ಒಟ್ಟಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದರೆ, ಒಂದೇ ತಿಂಗಳಿನಲ್ಲಿ ನಾಲ್ಕು ಚಿರತೆಗಳು ಅರಣ್ಯ ಇಲಾಖೆಯ ಬೋನಿನಲ್ಲಿ ಬಿದ್ದಿರುವುದು ಜನರನ್ನು ಭಯಭೀತರನ್ನಾಗಿಸಿದೆ. ಇನ್ನು ಸರಗೂರು ಭಾಗದಲ್ಲಂತೂ ಆಗಾಗ್ಗೆ ಕಾಡಾನೆ ಹಾಗೂ ಹುಲಿಗಳ ದಾಳಿ ನಡೆಯುತ್ತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯ ಜತೆಗೆ ಅನೇಕ ರೈತರೂ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ಸರಗೂರಿನ ಹೆಗ್ಗನೂರು ಗ್ರಾಮದಲ್ಲಿಯೂ ನಿರಂತರವಾಗಿ ಹುಲಿಯೊಂದು ದಾಳಿ ನಡೆಸಿ ನಾಲ್ಕೈದು ಜಾನುವಾರುಗಳನ್ನು ಬಲಿಪಡೆದಿತ್ತು. ಇತ್ತ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ವರ್ಷದ ಹಿಂದೆ ರತ್ನಮ್ಮ ಎಂಬವರ ಮೇಲೆ ಹುಲಿಯೊಂದು ದಾಳಿ ನಡೆಸಿ ಬಲಿ ಪಡೆದಿತ್ತು. ಈಗ ಅದೇ ಸ್ಥಳದಲ್ಲಿ ಹುಲಿ ಹಸುವೊಂದನ್ನು ಬಲಿ ಪಡೆದಿದೆ. ಇತ್ತೀಚೆಗೆ ಕಾಡಂಚಿನ ತಾಲ್ಲೂಕುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜಮೀನುಗಳಿಗೆ ಹೋಗಲು, ರಾತ್ರಿ ವೇಳೆ ರಸ್ತೆಯಲ್ಲಿ ತಿರುಗಾಡಲೂ ಆತಂಕ ಪಡುವಂತಾಗಿದೆ. ಕಾಡುಪ್ರಾಣಿಗಳು ಕಾಣಿಸಿಕೊಂಡಾಗ ಅರಣ್ಯ ಇಲಾಖೆಯವರು ಅವುಗಳನ್ನು ಹಿಡಿಯುವ ಭರವಸೆ ನೀಡುತ್ತಾರಾದರೂ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮವಹಿಸುವುದಿಲ್ಲ. ಆದ್ದರಿಂದ ಆಯಾ ಭಾಗದ ಶಾಸಕರು ಈ ಬಗ್ಗೆ ಗಮನಹರಿಸಿ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.
-ಸಂಜಯ್, ಎಚ್.ಡಿ.ಕೋಟೆ ತಾ.

Tags: