ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಸ್ಯಾಮ್ ಪಿಟ್ರೋಡಾ ಈಗ ಚೀನಾ ದೇಶವು ಭಾರತದ ವೈರಿ ದೇಶವಲ್ಲ ಎನ್ನುವ ಮೂಲಕ ಮತ್ತೊಂದು ಹೇಳಿಕೆ ಯಿಂದ ಟೀಕೆಗೆ ಗುರಿಯಾಗಿದ್ದಾರೆ. ಸ್ಯಾಮ್ ಪಿಟ್ರೋಡಾ ತಮ್ಮ ಸಾಧನೆಗಳಿಂದ ಸುದ್ದಿಯಾಗಿದ್ದಕ್ಕಿಂತ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ವೇಳೆ ಅನುವಂಶೀಯ ಆಸ್ತಿಗೆ ತೆರಿಗೆ ವಿಧಿಸುವ ಕುರಿತು ಅವರು ವಿವಾದಾತ್ಮ ಹೇಳಿಕೆ ನೀಡಿದ್ದರು. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿ ಚುನಾವಣೆಯಲ್ಲಿ ಕೆಲವು ನಿಶ್ಚಿತ ಸೀಟುಗಳನ್ನು ಕಳೆದುಕೊಳ್ಳುವಂತೆ ಮಾಡಿದ್ದರು. ಅದೂ ಸಾಲದು ಎಂಬಂತೆ ದಕ್ಷಿಣ ಭಾರತದವರು ಆಫ್ರಿಕಾದವರಂತೆ, ಪೂರ್ವದವರು ಚೀನಿಗಳಂತೆ, ಪಶ್ಚಿಮದವರು ಅರಬರಂತೆ ಮತ್ತು ಉತ್ತರದವರು ಬಿಳಿಯರಂತೆ ಕಾಣುತ್ತಾರೆ ಎಂದು ವರ್ಣ ದ್ವೇಷದ ಕಿಡಿ ಹಚ್ಚಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇವರಂತೆಯೇ ದಿಗ್ವಿಜಯ ಸಿಂಗ್, ಮಣಿಶಂಕರ್ ಅಯ್ಯರ್ ಸೇರಿದಂತೆ ಕೆಲವು ಹಿರಿಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುತ್ತಾರೆ. ದುರ್ದೈವವೆಂದರೆ ಕಾಂಗ್ರೆಸ್ ಹೈಕಮಾಂಡ್ ಇಂಥವರ ಬಾಯಿ ಮುಚ್ಚಿಸುವಲ್ಲಿ ವಿಫಲವಾಗಿದೆ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.





