ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಆರ್ಥಿಕ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿವೆ ಎಂದರೆ ತಪ್ಪಾಗಲಾರದು. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಿದ್ದಾರೆ.
ಆದರೆ ಈ ಗ್ಯಾರಂಟಿ ಯೋಜನೆಗಳು ಜಾರಿಯಾದ ದಿನದಿಂದಲೂ ರಾಜ್ಯಸರ್ಕಾರ ರಾಜ್ಯದ ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ‘ಭಾಗ್ಯ’ವನ್ನು ನೀಡುತ್ತಿರುವುದು ದೌರ್ಭಾಗ್ಯದ ಸಂಗತಿ. ಹಾಲು, ವಿದ್ಯುತ್, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ ಹಾಗೂ ತರಕಾರಿಗಳ ದರಗಳು ಸೇರಿದಂತೆ ಜನರು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ದರ ಏರಿಕೆಯ ಶಾಕ್ ನಿಂದ ಜನತೆ ಬಸವಳಿದಿದ್ದಾರೆ.
ಬದುಕು ಸಾಗಿಸುವುದೇ ದುಸ್ತರವಾಗಿದೆ. ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ವಸ್ತುಗಳ ಬೆಲೆ ಏರಿಸಿ, ಜನರನ್ನು ಹೈರಾಣಾಗಿಸಿದೆ ರಾಜ್ಯದ ಸಾಮಾನ್ಯ ಜನರ ಸ್ಥಿತಿ ನಾಲ್ಕಾಣಿ ಬೆಕ್ಕು ಎಂಟಾಣೆ ಹಾಲು ಕೊಂಡು ಕುಡಿಯುವಂತಾಗಿದೆ. ಇದನ್ನು ಮನಗಂಡು ರಾಜ್ಯಸರ್ಕಾರ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.