ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯು ೧೨,೧೫೪ ಕೋಟಿ ರೂ. ಆದಾಯ ಗಳಿಸಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಳೆದ ಹತ್ತು ವರ್ಷಗಳಿಂದಲೂ ರೈಲಿನಲ್ಲಿ ಪ್ರಯಾಣಿಸುವ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣದ ದರದಲ್ಲಿ ಶೇ.೩೦ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಹಿರಿಯ ನಾಗರಿಕರು ಸಾರ್ವಜನಿಕ ವಾಹನಗಳಲ್ಲಿ ಓಡಾಡುವುದನ್ನು ಸ್ಪಲ್ಪ ಮಟ್ಟಿಗಾದರೂ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರದಲ್ಲಿ ಹಿರಿಯರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ನಿಲ್ಲಿಸಿತು. ಇದರಿಂದಾಗಿ ಆರಂಭದಲ್ಲಿ ಆದಾಯದ ಪ್ರಮಾಣವೂ ಸ್ಪಲ್ಪಮಟ್ಟಿಗೆ ತಗ್ಗಿತಾದರೂ ಈಗ ಅದು ಮತ್ತೆ ಏರಿಕೆ ಕಂಡಿದೆ.
ಸದ್ಯ ದೇಶದಲ್ಲಿ ಕೊರೊನಾ ಸೋಂಕು ತೀರಾ ಕಡಿಮೆಯಾಗಿದ್ದು, ರೈಲ್ವೆ ಇಲಾಖೆಯೂ ಲಾಭದಾಯಕವಾಗಿ ಮುಂದುವರಿಯುತ್ತಿದೆ. ಆದ್ದರಿಂದ ರೈಲ್ವೆ ಸಚಿವರು ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣ ದರದಲ್ಲಿ ಈ ಹಿಂದೆ ಇದ್ದ ಶೇ.೩೦ರಷ್ಟು ರಿಯಾಯಿತಿಯನ್ನು ಶೇ.೪೦ಕ್ಕೆ ಏರಿಸುವ ಮೂಲಕ ರಿಯಾಯಿತಿಯನ್ನು ಮರುಜಾರಿಗೆ ತರಬೇಕಿದೆ.
–ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು