ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆ (ಶಾಂತಿಸಾಗರ್ ಕಾಂಪ್ಲೆಕ್ಸ್‌ನಿಂದ-ಕುವೆಂಪುನಗರ ಬಸ್ ಡಿಪೊ ಸರ್ಕಲ್)ಯಲ್ಲಿರುವ ಫುಟ್‌ಪಾತ್ ಅನ್ನು ಕೆಲವರು ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರೆ, ಅನೇಕ ಮಂದಿ ಮನೆ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಇಟ್ಟು ಬಳಸಿಕೊಳ್ಳುತ್ತಿದ್ದಾರೆ.
ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂದು ನಗರ ಪಾಲಿಕೆಯ ವತಿಯಿಂದ ಸುಸಜ್ಜಿತ ಫುಟ್‌ಪಾತ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಕೆಲವರು ಈ ಫುಟ್‌ಪಾತ್‌ಗಳಲ್ಲಿ ಇಟ್ಟಿಗೆ, ಎಂ-ಸ್ಯಾಂಡ್ ಹಾಗೂ ಇತರೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಇಟ್ಟಿದ್ದಾರೆ. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಪಘಾತಗಳಾಗುವಸಂಭವ ಹೆಚ್ಚಿದೆ. ಹೀಗೆ ಫುಟ್‌ಪಾತ್‌ಅನ್ನು ಆಕ್ರಮಿಸಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.