ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೬ನೇ ಬಜೆಟ್ ಮಂಡನೆ ವೇಳೆ ಸಿನಿಮಾ ಟಿಕೆಟ್ ದರ ನಿಗದಿಯ ಬಗ್ಗೆ ಪ್ರಸ್ತಾಪಿಸಿದ್ದು, ಸಿನಿ ಪ್ರಿಯರಿಗೆ ಸಂತಸ ತಂದಿದೆ.
ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಮಲ್ಟಿ ಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ನಿಗದಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಸಿನಿಮಾ ಟಿಕೆಟ್‌ಗಳಿಗೆ ಯಾವುದೇ ನಿಗದಿತ ದರ ಇಲ್ಲದಿರುವ ಪರಿಣಾಮ ಥಿಯೇಟರ್‌ಗಳ ಮಾಲೀಕರು ತಮ್ಮಿಚ್ಛೆಯನುಸಾರ ದರ ನಿಗದಿ ಮಾಡುತ್ತಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ದಿನಕಳೆದಂತೆ ದರ ಏರಿಳಿತವಾಗುತ್ತದೆ. ಅಲ್ಲದೆ ಅನ್ಯಭಾಷೆಯ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಾರೆ. ಇದರಿಂದಾಗಿ ಜನರು ಥಿಯೇಟರ್ ಗಳಿಗೆ ಬರಲು ಹಿಂದೇಟು ಹಾಕುತ್ತಾರೆ. ಇದೆಲ್ಲವನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೦೧೩ರಲ್ಲಿ ತಮ್ಮದೇ ಸರ್ಕಾರದ ಅಧಿಕಾರದಲ್ಲಿದ್ದಾಗ ಏಕ ಪರದೆ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಒಂದೇ ದರ ನಿಗದಿ ಮಾಡಿದ್ದನ್ನು ನೆನೆಪಿಸಿಕೊಂಡು, ಸಿನಿ ಪ್ರಿಯರಿಗೆ ಅನುಕೂಲವಾಗುವಂತೆ ದರ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಹೆಚ್ಚಿನ ಮಂದಿ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲು ಅನುಕೂಲವಾಗಲಿದ್ದು, ಕನ್ನಡ ಸಿನಿಮಾಗಳ ಬೆಳವಣಿಗೆಯೂ ಆಗಲಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





