ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯು ಗಿಡ-ಮರಗಳ ಬೇರುಗಳಿಂದ ಶಿಥಿಲಗೊಳ್ಳುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಶತಮಾನಗಳಿಂದಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ, ಯಾರೂ ಬೇಧಿಸಲಾಗದ ಕೋಟೆ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಚಿತ್ರದುರ್ಗ ಕೋಟೆಯು ಇತ್ತೀಚಿನ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಶಿಥಿಲಗೊಳ್ಳುತ್ತಿರುವುದು ದುರಂತವೇ ಸರಿ. ಭಾರತೀಯ ಪುರಾತತ್ವ ಮತ್ತು ಸರ್ವೆಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದೂರು ಬಂದಾಗ ಮಾತ್ರ ಚಿತ್ರದುರ್ಗದ ಕೋಟೆಯ ಸಮಸ್ಯೆಗಳ ಕಡೆ ಗಮನಹರಿಸುತ್ತಾರೆಯೇ ವಿನಾ ಸಮಯಾನುಸಾರ ಕೋಟೆಯ ರಕ್ಷಣೆಗೆ ಮುಂದಾಗುವುದಿಲ್ಲ. ಇದರಿಂದಾಗಿ ಕೋಟೆ ಶಿಥಿಲಗೊಳ್ಳುತ್ತಿದೆ. ಅಧಿಕಾರಿಗಳು ಆಗಾಗ್ಗೆ ಕೋಟೆ, ಅಲ್ಲಿನ ಸ್ಮಾರಕಗಳಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅವುಗಳಿಗೆ ಹಾನಿಯಾಗಿದ್ದರೆ ಕೂಡಲೇ ಅವುಗಳ ರಕ್ಷಣೆಗೆ ಕ್ರಮವಹಿಸಬೇಕು. ಆಗ ಮಾತ್ರ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಸಾಧ್ಯ. ಚಿತ್ರದುರ್ಗದ ಕೋಟೆ ಒಂದು ಪ್ರವಾಸಿ ತಾಣವಾಗಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದ ಸರ್ಕಾರಕ್ಕೂ ಆದಾಯವಿದೆ. ಆದ್ದರಿಂದ ಸರ್ಕಾರ ಇಂತಹ ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಮುಂದಾಗಬೇಕು.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.





