ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ.
ಹಲವು ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ನದಿ ಪಾತ್ರದ ಹೊಲ-ಗದ್ದೆಗಳು, ಗ್ರಾಮಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ಸಾಕಷ್ಟು ಕಡೆ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಗಳೂ ನೀರಿನಲ್ಲಿ ಮುಳುಗಿ ಹೋಗಿದ್ದು, ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇಂತಹ ಸಂದರ್ಭದಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವುದು ಅತ್ಯಗತ್ಯ.
ಆದರೆ ಕೆಲವರು ಪ್ರವಾಹದ ಸಂದರ್ಭದಲ್ಲಿಯೂ ಹುಚ್ಚು ಸಾಹಸಗಳನ್ನು ಮಾಡಲು ಹೋಗಿ ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ವಾಹನ ಚಲಾಯಿಸುತ್ತಾರೆ. ಇನ್ನು ಕೆಲವರು ನದಿಗಿಳಿದು ಆಟವಾಡಲು ಹೋಗಿ ಅಥವಾ ನದಿಯ ಅಂಚಿನಲ್ಲಿ ನಿಂತು ಫೋಟೋ ತೆಗೆದುಕೊಳ್ಳಲು ಹೋಗಿ ನೀರುಪಾಲಾಗುವುದೂ ಉಂಟು. ಪ್ರವಾಹದ ಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಯವರು, ಪೊಲೀಸರು, ಜಿಲ್ಲಾಡಳಿತದವರು ನದಿಪಾತ್ರದ ಜನರಿಗೆ ಒಂದಷ್ಟು ಸೂಚನೆಗಳನ್ನು ನೀಡಿರುತ್ತಾರೆ. ಮಾಧ್ಯಮಗಳೂ ಅವುಗಳನ್ನು ಬಿತ್ತರಿಸಿ ಜನರಲ್ಲಿ ಜಾಗೃತಿ ಮೂಡಿಸಿರುತ್ತವೆ. ಸಾರ್ವಜನಿಕರು ಆ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮೂಲಕ ಪ್ರವಾಹದ ಸಂದರ್ಭದಲ್ಲಿ ಜಾಗೃತಿ ವಹಿಸುವುದು ಒಳ್ಳೆಯದು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.





