ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ ಜಾಹೀರಾತುಗಳಲ್ಲಿ ಪಾನ್ ಮಸಾಲ ಹಾಗೂತಂಬಾಕು ಉತ್ಪನ್ನಗಳನ್ನು ಪ್ರಚೋದಿಸುವ ಜಾಹೀರಾತುಗಳನ್ನು ಅಳವಡಿಸುವುದು ಎಷ್ಟು ಸರಿ ? ಎಂಬ ಪ್ರಶ್ನೆ ಕಾಡುತ್ತದೆ. ಬಿಎಂಟಿಸಿ ಬಸ್‌ಗಳು ಪ್ರತಿದಿನ ಲಕ್ಷಾಂತರ ಜನರಿಗೆ, ಅದರಲ್ಲೂ ವಿದ್ಯಾರ್ಥಿಗಳು, ಯುವಕರು ಹಾಗೂ ಸಾಮಾನ್ಯ ನಾಗರಿಕರಿಗೆ ನೇರವಾಗಿ ಕಾಣುವ ಸಾರ್ವಜನಿಕ ಮಾಧ್ಯಮ. ಪಾನ್ ಮಸಾಲ ಮತ್ತು ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂತಹ ಜಾಹೀರಾತುಗಳು ಯುವ ಮನಸ್ಸುಗಳ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇದೆ. ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಉತ್ಪನ್ನಗಳಿಂದ ಆದಾಯ ಗಳಿಸುವುದು ನೈತಿಕವಾಗಿಯೂ ಸರಿಯಲ್ಲ.
ಸರ್ಕಾರದ ಜಾಹೀರಾತು ನೀತಿ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಸಮಾಜದ ಹಿತವನ್ನು ಕಾಪಾಡುವುದು ಅಗತ್ಯ. ಮದ್ಯ, ತಂಬಾಕು, ಪಾನ್ ಮಸಾಲದಂತಹ ಉತ್ಪನ್ನಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಽಸಿ, ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಜಾಹೀರಾತುಗಳಿಗೆ ಆದ್ಯತೆ ನೀಡಬೇಕು. ಆದಾಯಕ್ಕಿಂತಲೂ ಜನರ ಆರೋಗ್ಯ ಮತ್ತು ಭವಿಷ್ಯ ಮುಖ್ಯ ಎಂಬುದನ್ನು ಬಿಎಂಟಿಸಿ ಮತ್ತು ಸರ್ಕಾರ ಮನಗಾಣಬೇಕು.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು




