Mysore
32
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ಓದುಗರ ಪತ್ರ: ಬಿರು ಬೇಸಿಗೆಯಲ್ಲಿ ಇರಲಿ ಎಚ್ಚರ

ಓದುಗರ ಪತ್ರ

ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು ೩೪ ಸೆಲ್ಸಿಯಸ್‌ಗೂ ಹೆಚ್ಚು ಪ್ರಮಾಣದಲ್ಲಿ ಬಿಸಿಲಿನ ತಾಪ ಮಾನ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನರು ಎಚ್ಚರ ವಹಿಸುವುದು ಅಗತ್ಯವಾಗಿದೆ. ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ರೈತರು ಭತ್ತದ ಹುಲ್ಲು, ಸಿರಿಧಾನ್ಯಗಳ ಹುಲ್ಲನ್ನು ಜಾನುವಾರುಗಳಿಗಾಗಿ ಸಂಗ್ರಹ ಮಾಡಿರುತ್ತಾರೆ. ಇಂತಹ ಪ್ರದೇಶಗಳಲ್ಲಿ ಬೀಡಿ, ಸಿಗರೇಟು ಸೇದುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಧೂಮಪಾನ ಮಾಡಿ ಉಳಿದ ಭಾಗ ಮತ್ತು ಬೆಂಕಿಕಡ್ಡಿಯನ್ನು ಕಷ್ಟ ಪಟ್ಟು ರೈತ ಸಂಗ್ರಹಿಸಿ ಇಟ್ಟಿರುವ ಹುಲ್ಲಿನ ಮೆದೆಗಳಿರುವ ಕಡೆ ಬೀಸಾಡುವಾಗ ಬೀಡಿ, ಸಿಗರೇಟು ಮತ್ತು ಬೆಂಕಿ ಕಡ್ಡಿಯಲ್ಲಿನ ಬೆಂಕಿಯನ್ನು ಸಂಪೂರ್ಣವಾಗಿ ಹಾರಿಸಿ ಖಾಲಿ ಜಾಗದಲ್ಲಿ ಹಾಕಬೇಕು. ಬೇಸಿಗೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಹೆಚ್ಚು ಒಣಗುವ ಮರ ಗಿಡಗಳು, ಹುಲ್ಲು, ಪೇಪರ್ ಮತ್ತು ಪ್ಲಾಸ್ಟಿಕ್ ಕವರ್ ಗಳಿಗೆ ಸ್ವಲ್ಪ ಬೆಂಕಿಯ ಕಿಡಿ ತಾಗಿದರೂ ಬೆಂಕಿ ಹೊತ್ತಿಕೊಂಡು ಸುತ್ತಮುತ್ತಲ ಪ್ರದೇಶಕ್ಕೆ ವ್ಯಾಪಿಸಿ, ಅಪಾರ ಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸಾರ್ವಜನಿಕರು ಪರಿಸರ ಸಂರಕ್ಷಣೆ ಮತ್ತು ಕಾಡಿನ ರಕ್ಷಣೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.ಜೊತೆಗೆ ನೀರನ್ನು ವ್ಯರ್ಥ ಮಾಡದೆ ಮಿತ ಪ್ರಮಾಣದಲ್ಲಿ ಬಳಸಬೇಕು. ಈಗಾಗಲೇ ರಾಜ್ಯದ ಅನೇಕ ಕೆರೆ- ಕಟ್ಟೆಗಳಲ್ಲಿ ನೀರು ಇಂಗಿ ಹೋಗಿ,ನೀರಿನ ಅಭಾವ ಸೃಷ್ಟಿಯಾಗಿದ್ದು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವುದೇ ದುರ್ಲಭವಾಗಿದೆ. ಮತ್ತೊಂದೆಡೆ ಬಿಸಿಲ ಝಳ ಹೆಚ್ಚುತ್ತಿದೆ. ಮಳೆ ಬರುವುದು ತಡವಾದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಬಿಗಡಾಯಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ಪರಿಸರ, ವನ್ಯಜೀವಿಗಳು, ಪ್ರಾಣಿ ಪಕ್ಷಿಗಳ ಸುರಕ್ಷತೆ, ಗಿಡ ಮರಗಳ ಸಂರಕ್ಷಣೆ, ನೀರು, ಆಹಾರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರ ಪಾತ್ರ ಇಂತಹ ಸಂದರ್ಭಗಳಲ್ಲಿ ಅತ್ಯಂತ ಅಗತ್ಯವಾಗಿದೆ.

 -ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!