ಮೈಸೂರು- ಶಿವಮೊಗ್ಗ ಮಾರ್ಗದಲ್ಲಿ ಬೀರೂರು, ತರೀಕೆರೆ, ಅರಸೀಕೆರೆ ಮೊದಲಾದ ರೈಲು ನಿಲ್ದಾಣಗಳಲ್ಲಿ ನೀರು, ಬಿಸ್ಕೆಟ್, ಕುರ್‌ಕುರೆ, ಲೇಸ್, ಚಿಪ್ಸ್ ಮೊದಲಾದ ತಿಂಡಿ ಪ್ಯಾಕೆಟ್‌ಗಳಿಗೆ ದುಪ್ಪಟ್ಟು ಬೆಲೆ ಪಡೆದು ಗ್ರಾಹಕರನ್ನು ವಂಚಿಸಲಾಗುತ್ತಿದೆ. ೫ ರೂ. ಬೆಲೆಯ ಮೂಂಗ್‌ದಾಲ್‌ನ ಚಿಕ್ಕ ಪ್ಯಾಕೆಟ್‌ಗೆ ೧೦ ರೂ. ಪಡೆಯಲಾಗುತ್ತಿದೆ. ೧೫ ರೂ. ಮುಖಬೆಲೆಯ ನೀರಿನ ಬಾಟಲಿಗೂ ೨೦ ರೂ. ಪಡೆಯಲಾಗುತ್ತಿದೆ. ಇದರಿಂದ ದಿನ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳೂ ಹೊರತಾಗಿಲ್ಲ. ೭ ರೂ. ಬೆಲೆಯ ದಿನ ಪತ್ರಿಕೆಗಳನ್ನು ೧೦ ರೂ., ೨೫ ರೂ. ಬೆಲೆಯ ನಿಯತ ಕಾಲಿಕೆಗಳನ್ನು ೩೦ ರೂ.ಗೆ ಮಾರಾಟ ಮಾಡುತ್ತಾರೆ. ಇದನ್ನು ಪ್ರಯಾಣಿಕರು ಪ್ರಶ್ನಿಸಿದರೆ ನಾವು ಮಾರಾಟ ಮಾಡುವುದೇ ಇಷ್ಟು ಹಣಕ್ಕೆ, ಬೇಕಾದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಬಿಡಿ ಎಂದು ಮಾರಾಟಗಾರರು ಉದ್ಧಟತನದಿಂದ ಉತ್ತರಿಸುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಹಲವಾರು ವರ್ಷಗಳಿಂದ ಈ ರೀತಿ ವಂಚನೆಯಾಗುತ್ತಿದ್ದರೂ ರೈಲ್ವೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಇದಕ್ಕೆ ಕಾರಣವೇನು? ಅವರಿಗೂ ಇದರಲ್ಲಿ ಪಾಲು ಸಂದಾಯವಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಸಂಬಂಧಪಟ್ಟವರು ಕೂಡಲೇ ಪ್ರಯಾಣಿಕರಿಂದ ಹೆಚ್ಚು ಹಣ ಪಡೆದು ವಂಚಿಸುತ್ತಿರುವ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಾಗಿದೆ.
– ಮಹತಿ, ಮೈಸೂರು





