ಮೈಸೂರಿನ ಸಯ್ಯಾಜಿರಾವ್ ರಸ್ತೆ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪ (ಮಹಾರಾಜ ಕಾಂಪ್ಲೆಕ್ಸ್ ಎದುರು) ರಸ್ತೆಬದಿ ವ್ಯಾಪಾರಸ್ಥರಿಂದ ಪಾದಚಾರಿಗಳಿಗೆ ದಿನನಿತ್ಯ ಬಹಳ ತೊಂದರೆಯಾಗುತ್ತಿದೆ. ರಸ್ತೆಯ ಎರಡೂ ಬದಿಗಳನ್ನು ಇವರು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳಿಗೆ ಓಡಾಡಲು ಕಷ್ಟವಾಗುತ್ತಿದೆ. ಹೀಗೆ ಇವರು ಈ ಜಾಗವನ್ನು ಆಕ್ರಮಿಸಿಕೊಂಡರೆ ಸಾರ್ವಜನಿಕರು ನಡೆದಾಡುವುದಾದರೂ ಹೇಗೆ? ಗ್ರಾಮಾಂತರ ಬಸ್ ನಿಲ್ದಾಣ ದಿನದ ೨೪ ಗಂಟೆಗಳೂ ಜನರಿಂದ ತುಂಬಿರುತ್ತದೆ. ರಸ್ತೆ ಬದಿ ವ್ಯಾಪಾರಸ್ಥರ ಉಪಟಳದಿಂದ ವಯೋವೃದ್ಧರಿಗೆ, ಮಕ್ಕಳಿಗೆ ಇಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ. ಅದೂ ಅಲ್ಲದೇ ಇವರ ಕಿರಿಕಿರಿಯಿಂದ ಅಲ್ಲಿರುವ ಅಂಗಡಿ ಮಾಲೀಕರಿಗೆ ಸರಿಯಾಗಿ ವ್ಯಾಪಾರ ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಪಾಲಿಕೆಯವರು ಇವರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಿ, ಅಲ್ಲಿ ವ್ಯಾಪಾರ ನಡೆಸಲು ಅನುವು ಮಾಡಿಕೊಟ್ಟು, ಇವರನ್ನು ಆದಷ್ಟು ಬೇಗ ತೆರವುಗೊಳಿಸಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಸಹಕರಿಸಬೇಕಾಗಿದೆ.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು





