ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು ತುಳಿದುಕೊಂಡೇ ಓಡಾಡುವುದು ಅನಿವಾರ್ಯವಾಗಿದೆ. ಪ್ರಸ್ತುತ ಇರುವ ಒಳಚರಂಡಿ ಪೈಪ್ ಲೈನ್ ಅರ್ಧ ಅಡಿ ವ್ಯಾಸವುಳ್ಳದ್ದಾಗಿರುವುದರಿಂದ ಯುಜಿಡಿ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆ ಹರಿಯುತ್ತಿದೆ. ಹಳೆಯ ಪೈಪ್ ಲೈನ್ ಬದಲಿಸಿ ಒಂದು ಅಡಿ ವ್ಯಾಸವುಳ್ಳ ಪೈಪ್ ಲೈನ್‌ಅನ್ನು ಅಳವಡಿಸುವುದು ಅಗತ್ಯವಾಗಿದೆ. ವೀಣೆ ಶಾಮಣ್ಣ ರಸ್ತೆಗೆ ಸಿಮೆಂಟ್ ಟೈಲ್ಸ್ ಅಳವಡಿಸಿರುವುದರಿಂದ ನೀರು ಇಂಗದೇ ಕೆರೆಯಂತಾಗುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ವೀಣೆ ಶಾಮಣ್ಣ ರಸ್ತೆಗೆ ಅಳವಡಿಸಿರುವ ಸಿಮೆಂಟ್ ಟೈಲ್ಸ್‌ಗಳನ್ನು ತೆರವುಗೊಳಿಸಿ ಡಾಂಬರ್ ರಸ್ತೆಯನ್ನು ನಿರ್ಮಿಸಲು ಶಾಸಕರು ಹಾಗೂ ಮೈಸೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
-ಎಲ್.ಎನ್.ಪ್ರಕಾಶ್, ವೀಣೆ ಶಾಮಣ್ಣ ರಸ್ತೆ, ಮೈಸೂರು



