ರಾಜ್ಯಾದ್ಯಂತ ವಿಜೃಂಭಣೆಯಿಂದ ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಆಚರಿಸಲಾಗಿದೆ. ಆಯುಧ ಪೂಜೆ ಅಂಗವಾಗಿ ಬಾಳೆಹಣ್ಣು, ತೆಂಗಿನಕಾಯಿ ಹಾಗೂ ಬೂದುಗುಂಬಳ ಕಾಯಿಯನ್ನು ಒಡೆದು ಪೂಜೆ ಮಾಡುವುದು ಸಂಪ್ರದಾಯ.
ಬಳಿಕ ತೆಂಗಿನ ಕಾಯಿ ಹಾಗೂ ಬಾಳೆಹಣ್ಣನ್ನು ತೆಗೆದುಕೊಂಡು ಹೋಗುವ ಜನರು ಬೂದುಗುಂಬಳ ಕಾಯಿಯನ್ನು ಮಾತ್ರ ಒಡೆದ ಸ್ಥಳದಲ್ಲಿಯೇ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ವಾಹನಗಳು, ಯಂತ್ರಗಳಿಗೆ ಪೂಜೆ ಸಲ್ಲಿಸಿದ ನಂತರ ಕೋಳಿ ಬಲಿ ನೀಡುತ್ತಾರೆ. ಬಳಿಕ ಅದನ್ನು ಅಡುಗೆ ಮಾಡಿ ತಿನ್ನುತ್ತಾರೆ. ಆದರೆ ಬೂದುಗುಂಬಳಕಾಯಿ ಒಳ್ಳೆಯ ಆಹಾರ ಪದಾರ್ಥವಾಗಿದ್ದರೂ ಅದನ್ನು ಯಾರೂ ಬಳಸುವುದಿಲ್ಲ. ಬೂದುಗುಂಬಳದಲ್ಲಿಯೂ ಬಗೆ ಬಗೆಯ ತಿನಿಸುಗಳನ್ನು ತಯಾರಿಸಬಹುದು.
ಮಜ್ಜಿಗೆ ಹುಳಿ, ಹಲ್ವಾ, ಜ್ಯೂಸ್ ಮಾಡಿ ಬಳಸಿದರೆ ಈ ಆಹಾರ ಪದಾರ್ಥವೂ ವ್ಯರ್ಥವಾಗುವುದಿಲ್ಲ, ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಈ ಬಗ್ಗೆ ಈಗಾಗಲೇ ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಮತ್ತು ಡೀಡ್ ಸಂಸ್ಥೆಯ ಡಾ.ಎಸ್.ಶ್ರೀಕಾಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಒಡೆದ ಬೂದುಗುಂಬಳ ಕಾಯಿಗೆ ರಾಸಾಯನಿಕಯುಕ್ತ ಕುಂಕುಮವನ್ನು ಹಾಕಿ ಬೀದಿ ಬೀದಿಯಲ್ಲಿ ಬೀಸಾಡುವುದರಿಂದ ಅವುಗಳನ್ನು ಸೇವಿಸುವ ಚಾನುವಾರುಗಳಿಗೂ ಆರೋಗ್ಯದ ಸಮಸ್ಯೆ ಕಾಡಬಹುದು. ಆದ್ದರಿಂದ ಪೂಜೆ ಮುಗಿದ ನಂತರ ಅದನ್ನು ನಾವು ಆಹಾರವಾಗಿ ಬಳಸಬೇಕು ಎಂದು ಅವರು ಮನವಿ ಮಾಡಿರುವುದರಲ್ಲಿ ಅರ್ಥವಿಲ್ಲದಿಲ್ಲ.
ಶ್ರೀಕಾಂತ್, ಹುಣಸೂರು