Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

ಓದುಗರ ಪತ್ರ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ ನೀವು ಹೇಗಿರಬೇಕೆಂದು ಗೊತ್ತಿಲ್ಲವೇ…’(ಪತ್ರಿಕಾ ವರದಿ ೨೬.೧೨.೨೫) ಎಂದು ತಹಸಿಲ್ದಾರ್ ಡಿ.ಪಿ.ಶರತ್ ಕುಮಾರ್ ಅವರನ್ನು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಜನರ ಕುಂದುಕೊರತೆ ಸಭೆಯಲ್ಲಿ ಹೀನ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಉಪ ಲೋಕಾಯುಕ್ತರು ಕರ್ನಾಟಕದಲ್ಲಿ ಶೇ.೬೩ ಭ್ರಷ್ಟಾಚಾರವಿದೆ. ಭ್ರಷ್ಟಾಚಾರದಲ್ಲಿ ರಾಜ್ಯ ೫ನೇ ಸ್ಥಾನದಲ್ಲಿದೆ ಎಂದು ಹೇಳಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಶೇ.೪೦ ಕಮಿಷನ್ ಎಂದು ಬೊಬ್ಬೆ ಹಾಕಿ, ಅದನ್ನೇ ಮೆಟ್ಟಿಲಾಗಿ ಮಾಡಿಕೊಂಡು ಅಧಿಕಾರಕ್ಕೆ ಬಂದ ಈಗಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಶೇ೬೩ ರಷ್ಟನ್ನೂ ದಾಟಿರುವುದು ಜಗಜ್ಜಾಹೀರು. ವರ್ಗಾವಣೆ ದಂಧೆಯಲ್ಲಿ ಹಿಂದಿನ ಸರ್ಕಾರಗಳ ಅವಧಿಯ ಭ್ರಷ್ಟಾಚಾರವನ್ನೂ ಮೀರಿಸಿರುವುದು ಸುಳ್ಳೇನಲ್ಲ. ೯೦ರ ದಶಕದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕದ ಎಂ.ಬಿ.ಕರಕಣ್ಣನವರ್ ಎಂಬವರು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದರು. ಪ್ರಾಮಾಣಿಕರಾದ ಅವರು ನೌಕರ ವರ್ಗದಲ್ಲಿ ಶಿಸ್ತು, ಕರ್ತವ್ಯ ನಿಷ್ಠೆಗೆ ಕಾರಣರಾಗಿದ್ದರು. ಚಾಮರಾಜ ಜೋಡಿ ರಸ್ತೆಯ ಆರೋಗ್ಯ ಕೇಂದ್ರದ ಒಂದು ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಇದನ್ನು ಸಹಿಸದ ಪಟ್ಟಭದ್ರ ಅಧಿಕಾರಿಗಳ ಒಂದು ವರ್ಗ ಒಂದೆರಡು ವರ್ಷಗಳಲ್ಲಿಯೇ ಅವರನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಿಸಿತು. ಇಂತಹ ವ್ಯವಸ್ಥೆಯಡಿ ಯಾರೋ ಒಬ್ಬ ನೌಕರ, ಅಧಿಕಾರಿಯನ್ನು ದೂಷಿಸಿದರೆ ಪ್ರಯೋಜನವೇನು? ಅದು ಸರ್ಕಾರದ ಮಟ್ಟದಲ್ಲೇ ಆಗಬೇಕು, ಅಂತಹ ಕಾಲಕ್ಕಾಗಿ ಜನ ಎದುರು ನೋಡುತ್ತಿದ್ದಾರೆ.ಯಥಾ ರಾಜ.. ತಥಾ ಅಧಿಕಾರಿ…

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!