ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್ ಹಾಗೂ ರ‍್ಯಾಪಿಡೋ ಆಟೋ ಚಾಲಕರು ಗ್ರಾಹಕರಿಂದ ದುಪ್ಪಟ್ಟು ಬಾಡಿಗೆ ಪಡೆಯುತ್ತಿದ್ದಾರೆ. ಉದಾಹರಣೆಗೆ ರಾತ್ರಿ ವೇಳೆ ಮೈಸೂರಿನ ರೈಲು ನಿಲ್ದಾಣದಿಂದ ಹೆಬ್ಬಾಳಕ್ಕೆ ತೆರಳಲು ಆನ್‌ಲೈನ್ ಮೂಲಕ ಆಟೋ ಬುಕ್ ಮಾಡಿದರೆ ಫೋನ್ ಮಾಡಿ ೩೦೦ ರೂ. ಕೊಟ್ಟರೆ ಮಾತ್ರ ಬರುತ್ತೇವೆ, ಇಲ್ಲದಿದ್ದರೆ ಬರುವುದಿಲ್ಲ ಎಂದು ದರ್ಪ ತೋರಿಸುತ್ತಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ? ಮನಸೋ ಇಚ್ಛೆ ಹೀಗೆ ಹಣ ಕೇಳಿದರೆ ಗ್ರಾಹಕ ಎಲ್ಲಿಗೆ ಹೋಗಬೇಕು? ಮೀಟರ್ ಪ್ರಕಾರ ಹಣ ಪಡೆಯುವುದನ್ನು ನಿಲ್ಲಿಸಿ ಸುಮಾರು ವರ್ಷಗಳೇ ಕಳೆದಿವೆ. ಇದೆಲ್ಲವನ್ನು ಹೋಲಿಸಿದರೆ ಪ್ರೀಪೇಯ್ಡ್ ಆಟೋ ಸೇವೆ ಸ್ವಲ್ಪ ಪರವಾಗಿಲ್ಲ. ರಾತ್ರಿ ೯ ಗಂಟೆ ನಂತರ ಒಂದೂವರೆ ಪಟ್ಟು ದರದಂತೆ ಬಾಡಿಗೆ ಪಡೆಯುತ್ತಾರೆ. ಹೈಕೋರ್ಟ್ ಆದೇಶದಂತೆ ಇತ್ತೀಚೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ರದ್ದುಮಾಡಲಾಗಿದೆ. ಇದರಿಂದಲೂ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗಿದೆ. ಏಕೆಂದರೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಕೈಗೆಟುಕುವ ದರದಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು. ಓಲಾ, ಊಬರ್ ಹಾಗೂ ರ‍್ಯಾಪಿಡೋ ಕಂಪೆನಿಗಳು ಹಾಗೂ ಸಾರಿಗ ಇಲಾಖೆ ಅಧಿಕಾರಿಗಳು ಆಟೋ ಚಾಲಕರಿಗೆ ಗ್ರಾಹಕರಿಂದ ಹೆಚ್ಚುವರಿ ಹಣವನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಬೇಕಿದೆ.
– ಜಿ.ಪಿ.ಹರೀಶ್, ವಿ.ವಿ.ಮೊಹಲ್ಲ, ಮೈಸೂರು





