ಸರ್ಕಾರ ಎಪಿಎಲ್ ಕಾರ್ಡುದಾರರನ್ನು ಕೇವಲ ತೆರಿಗೆ ಪಾವತಿಸುವುದಕ್ಕೆ ಮಾತ್ರ ಸೀಮಿತ ಮಾಡಿಕೊಂಡಿದೆಯೇನೋ ಅನಿಸುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದೆಯೇ ವಿನಾ ಎಪಿಎಲ್ ಕಾರ್ಡುದಾರರನ್ನು ಕಡೆಗಣಿಸುತ್ತಿದೆ.
ಎಪಿಎಲ್ ಪಡಿತರ ಚೀಟಿದಾರರಿಗೆ 15 ರೂ.ನಂತೆ ಮಾಸಿಕ 5 ಕೆ.ಜಿ. ಅಕ್ಕಿ ಕೊಡುತ್ತಿರುವುದನ್ನು ಬಿಟ್ಟರೆ ಇನ್ಯಾವುದೇ ಪಡಿತರ ಪದಾರ್ಥಗಳು ಇವರಿಗೆ ಸಿಗುತ್ತಿರಲಿಲ್ಲ.
ಕೆಲ ದಿನಗಳಿಂದ ಅಕ್ಕಿಯೂ ಲಭ್ಯವಾಗುತ್ತಿಲ್ಲ. ಇಂತಹ ಪಕ್ಷಪಾತ ಧೋರಣೆಗಳು ಏಕೆ? ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ನೀಡುವುದರಲ್ಲಿ ನ್ಯಾಯವಿದೆ. ಹಾಗಂದ ಮಾತ್ರಕ್ಕೆ ಎಪಿಎಲ್ ಕಾರ್ಡುದಾರರನ್ನು ಕಡೆಗಣಿಸಿ ಅವರಿಗೆ ಪಡಿತರವನ್ನೇ ನೀಡದೆ ಇರುವುದು ನ್ಯಾಯವೇ? ತೆರಿಗೆ ಪಾವತಿಸಲು ಎಪಿಎಲ್ ಕಾರ್ಡುದಾರರು ಬೇಕು, ಪಡಿತರಕ್ಕೆ ಬೇಡವೇ? ಬಿಪಿಎಲ್ ಕಾರ್ಡುದಾರರಿಗೆ ಪಡಿತರ ನೀಡಿದ ಬಳಿಕ ಉಳಿದ ಆಹಾರ ಪದಾರ್ಥಗಳನ್ನು ಸ್ವಲ್ಪ ಹೆಚ್ಚಿನ ದರದಲ್ಲಿ ಎಪಿಎಲ್ ಕಾರ್ಡುದಾರರಿಗೆ ನೀಡಬಹುದಲ್ಲವೇ?
ಇನ್ನು ಎಪಿಎಲ್ ಕಾರ್ಡುದಾರರು ತಿದ್ದುಪಡಿಯ ವಿಚಾರಕ್ಕೆ ಸಂಬಂಧಿಸಿದಂತೆ 4-5 ತಿಂಗಳುಗಳ ಹಿಂದೆಯೇ ದಾಖಲೆಗಳನ್ನು ಸಲ್ಲಿಸಿದರೂ ಇನ್ನೂ ಕಾರ್ಡುಗಳು ಅವರ ಕೈ ಸೇರಿಲ್ಲ. ಈ ಬಗ್ಗೆ ಆಹಾರ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಿದರೆ, ಎಪಿಎಲ್ ಪಡಿತರ ಚೀಟಿ ವಿತರಿಸಲು ಆದೇಶ ಬಂದಿಲ್ಲ ಎನ್ನುತ್ತಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಎಪಿಎಲ್ ಕಾರ್ಡುದಾರರಿಗೂ ಸೌಲಭ್ಯ ಒದಗಿಸಲಿ
-ಎ.ಎಸ್.ಗೋಪಾಲಕೃಷ್ಣ, ರಾಮಕೃಷ್ಣನಗರ, ಮೈಸೂರು.