ನಮ್ಮ ಸುತ್ತಲಿನ ಪ್ರಪಂಚ ಬಹಳ ಸುಂದರವಾಗಿದೆ. 76 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಆಳುವ ವರ್ಗಗಳು ಕಟ್ಟಕಡೆಯ ವ್ಯಕ್ತಿಯವರೆಗೂ ತನ್ನ ಅಭಿವೃದ್ಧಿಯ ಹೆಜ್ಜೆಗಳನ್ನು ತಲುಪಿಸಿದ್ದು, ಸಮಸ್ತ ಜನಕೋಟಿಯೂ ಸುಖ ಸಮೃದ್ಧಿಯಿಂದ ಬದುಕುತ್ತಿದ್ದಾರೆ ಎಂದು ಭಾವಿಸುತ್ತಾ ನಗರಗಳ ಹಿತವಲಯಗಳಲ್ಲಿ ಬದುಕು ಸವೆಸುವುದನ್ನು ಕಲಿತ ಸಮಾಜಕ್ಕೆ, ತನ್ನ ದೃಷ್ಟಿ ಎಷ್ಟು ಮಸುಕಾಗಿದೆ ಎಂದು ನಿರೂಪಿಸುವ ರೀತಿಯಲ್ಲಿ ‘ಆಂದೋಲನ’ ದಿನಪತ್ರಿಕೆಯ ತಂಡ ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಕಗ್ಗಾಡುಗಳಲ್ಲಿರುವ ಕುಗ್ರಾಮಗಳ ಪರಿಚಯವನ್ನು ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನಾರ್ಹ.
ಇಂಡಿಗನತ್ತ, ಮೆಂದಾರೆ, ದೊಡ್ಡಾಣೆ, ಕೊಕ್ಕಬೋರೆ, ತೋಕೆರೆ ಗ್ರಾಮಗಳ ಒಳಹೊಕ್ಕು, ಅಲ್ಲಿ ನಿಕೃಷ್ಟ ಬಾಳ್ವೆ ನಡೆಸುತ್ತಿರುವ ಅವಕಾಶ ವಂಚಿತ ಜನರನ್ನು ನಾಡಿನ ಜನತೆಗೆ ಪರಿಚಯಿಸುವ ಮೂಲಕ ‘ಆಂದೋಲನ’ ತಂಡ ನಾಗರಿಕ ಜಗತ್ತಿನ ಕಣ್ಣುಗಳಿಗೆ ಕವಿದಿದ್ದ ಪೊರೆಯನ್ನು ಕಳಚಿಹಾಕಿದೆ. ನಮ್ಮ ನಡುವೆಯೇ ಇಂತಹ ಗ್ರಾಮಗಳೂ ಇವೆಯೇ? ಎಂದು ಹುಬ್ಬೇರಿಸುವಂತೆ ವರದಿ ಮಾಡಲಾಗಿದೆ. ವರದಿಗಳಲ್ಲಿರುವ ಮಾನವೀಯ ಧ್ವನಿ ಮತ್ತು ಸಂವೇದನಾಶೀಲ ಅಕ್ಷರಗಳು ಆಳುವ ವರ್ಗಗಳನ್ನಷ್ಟೇ ಅಲ್ಲದೆ, ಈ ವರ್ಗಗಳನ್ನು ಮೆರೆಸುವ ಪ್ರಜ್ಞಾವಂತ ಸಮಾಜವನ್ನೂ ಎಚ್ಚರಿಸುವಂತಿವೆ. ಈ ವರದಿಗಾರಿಕೆ ಬಗ್ಗೆ ,ಆಂದೋಲನ’ದ ಬೆನ್ನುತಟ್ಟುವುದರೊಂದಿಗೇ, ನಮ್ಮ ಚುನಾಯಿತ ಪ್ರತಿನಿಧಿಗಳ ಎದೆಯ ಕದ ತಟ್ಟುವುದೂ ಅತ್ಯವಶ್ಯ ಎನ್ನುವುದನ್ನು ಈ ವರದಿಗಳು ನಿರೂಪಿಸಿವೆ. -ನಾ.ದಿವಾಕರ, ಮೈಸೂರು.