Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಓದುಗರ ಪತ್ರ: ಶಾಲೆ ಬಳಿಯೇ ಕಸದ ಗುಡ್ಡೆ!

ನಂಜನಗೂಡು ಬಜಾರ್ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇದೆ. ಇದನ್ನು ದಳವಾಯಿ ಶಾಲೆ ಎಂದೂ ಗುರುತಿಸಲಾಗಿದೆ. ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಈಗ ಶಾಲೆ ಇರುವ ಜಾಗದಲ್ಲಿ ಸೇನಾಪಡೆಯ ವಾಸ್ತವ್ಯಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿತ್ತು ಎನ್ನಲಾಗಿದೆ. ಇಂತಹ ಶಾಲೆಯ ಗೇಟಿನ ಮುಂಭಾಗದಲ್ಲಿ ಪ್ರತಿದಿನ ಬೆಳಿಗ್ಗೆ ಹೊತ್ತು ಒಂದು ಗುಡ್ಡೆ ಕಸ ಬಿದ್ದಿರುತ್ತದೆ.

ಈ ಕಸದ ಮೂಲ ಸಮೀಪದ ಅಂಗಡಿಗಳು ಅಥವಾ ಮನೆಯವರು ಇರಬಹುದು. ಆದರೆ, ಪ್ರತಿದಿನ ಬೆಳಿಗ್ಗೆ ನಗರಸಭೆಯ ಸ್ವಚ್ಛತಾ ಕಾರ್ಯ ವಾಹನ ಕಸ ಸಂಗ್ರಹಣೆಗಾಗಿ ಸಂಚರಿಸುತ್ತದೆ. ಆ ವಾಹನಕ್ಕೆ ಕಸ ನೀಡಬಹುದು. ಆದರೆ, ಶಾಲೆಯ ಮುಂದೆ ಕಸ ಹಾಕುವುದು ಸರಿಯೇ? ಪ್ರತಿದಿನ ಹೀಗೆ ಶಾಲೆಯ ಗೇಟ್‌ನ ಮುಂದೆ ಬೀಳುವ ಕಸದ ಗುಡ್ಡೆಯನ್ನು ನಗರಸಭೆ ಸ್ವಚ್ಛತಾಗಾರರು ತೆರವುಗೊಳಿಸುತ್ತಾರೆ. ಆದರೆ, ಶನಿವಾರ ಶಾಲೆಗೆ ಬೆಳಿಗ್ಗೆ ೭.೩೦ರ ಅಂದಾಜು ವೇಳೆಗೆ ಬರುವ ಮಕ್ಕಳು ಮತ್ತು ಶಿಕ್ಷಕರಿಗೆ ಕಸದ ಗುಡ್ಡೆ ಕಣ್ಣಿಗೆ ರಾಚಿದರೆ, ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಇದು ಈ ಕಸದ ವಾರಸುದಾರರಿಗೆ ಅರ್ಥವಾಗುತ್ತಿಲ್ಲವೇ?

ಸಾರ್ವಜನಿಕರು ಸಹಕರಿಸದಿದ್ದರೆ ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವುದು ಕಷ್ಟ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು, ಈ ಕಸದ ಸಮಸ್ಯೆಯನ್ನು ಬಗೆಹರಿಸಬೇಕು.

-ಮನೋಜ್‌ಕುಮಾರ್, ನಂಜನಗೂಡು

 

 

Tags:
error: Content is protected !!