ಬೇಸಿಗೆ, ರೋಗಬಾಧೆಯಿಂದ ಬೇಡಿಕೆಯ ಕಾಲುಭಾಗದಷ್ಟು ಎಳನೀರು ಮಾರುಕಟ್ಟೆಗೆ ಪೂರೈಕೆ; ತೆಂಗಿನಕಾಯಿಮದರ ಹೆಚ್ಚಳದಿಂದ ಎಳನೀರು ಮಾರಾಟಕ್ಕೆ ರೈತರ ಹಿಂದೇಟು
ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ಬೇಸಿಗೆ ಬಿಸಿಲ ಝಳದಿಂದ ಬಳಲಿರುವ ಜನತೆ ಸುಡು ಬಿಸಿಲು ತಾಳಲಾರದೆ ದಣಿವು ನೀಗಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಬೇಡಿಕೆ ಹೆಚ್ಚುತ್ತಿರುವ ಕಾರಣ ನೈಸರ್ಗಿಕ ಪಾನೀಯ ಎಳನೀರಿನ ಬೆಲೆ ಗಗನಕ್ಕೇರಿದೆ.
ರೋಗಬಾಧೆಯಿಂದಾಗಿ ಮಾರುಕಟ್ಟೆಗೆ ಬೇಡಿಕೆಯಷ್ಟು ಎಳನೀರು ಪೂರೈಕೆ ಯಾಗುತ್ತಿಲ್ಲ. ಈ ಬೇಸಿಗೆಯಲ್ಲಿ ಬೇಡಿಕೆಯ ಕಾಲು ಭಾಗದಷ್ಟು ಎಳನೀರು ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಜತೆಗೆ ಹೊರ ರಾಜ್ಯ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸಾಗಣೆ ಯಾಗುತ್ತಿರುವುದರಿಂದ ಸ್ಥಳೀಯವಾಗಿ ಎಳ ನೀರು ಕೊರತೆ ಉಂಟಾಗಿದೆ. ಹಾಗಾಗಿ ಎಳನೀರಿನ ದರ ೮೦ ರೂಪಾಯಿ ದಾಟುವ ಸಾಧ್ಯತೆ ಹೆಚ್ಚಿದೆ.
ನಗರದ ಮಹಾರಾಜ ಕಾಲೇಜು ಮೈದಾನ, ಆರ್‌ಟಿಒ ವೃತ್ತ, ಸಿದ್ದಪ್ಪ ಚೌಕ, ನೂರು ಅಡಿ ರಸ್ತೆ ಹಾಗೂ ಹಲವು ಬಡಾವಣೆಗಳು, ಹೊರ ವರ್ತುಲ ರಸ್ತೆಗಳಲ್ಲಿ ಎಳನೀರು ವ್ಯಾಪಾರ ಜೋರಾಗಿದೆ. ಆದರೆ, ದರ ಕೇಳಿದ ತಕ್ಷಣ ಗ್ರಾಹಕರು ಬೆಚ್ಚಿ ಬೀಳುತ್ತಿದ್ದು, ಎಳನೀರನ್ನು ಕುಡಿಯದೆ ತಂಪು ಪಾನೀಯಗಳ ಮೊರೆ ಹೋಗುತ್ತಿ ದ್ದಾರೆ. ಒಂದೊಂದು ಭಾಗದಲ್ಲಿ ಒಂದೊಂದು ದರದಲ್ಲಿ ಎಳನೀರು ಮಾರಾಟವಾಗುತ್ತಿದೆ. ಮಹಾರಾಜ ಕಾಲೇಜು ಮೈದಾನದ ಬಳಿ ನಿತ್ಯ ೨೦೦ರಿಂದ ೩೦೦ರಷ್ಟು ಎಳನೀರು ಮಾರಾಟವಾಗುತ್ತದೆ. ನಮ್ಮಲ್ಲಿ ನಿತ್ಯ ೧೫೦-೨೦೦ ಎಳನೀರು ಮಾರುತ್ತೇವೆ. ಒಂದೊಂದು ದಿನ ವ್ಯಾಪಾರ ನಡೆಯುವುದಿಲ್ಲ. ಈಗಂತೂ ತೋಟಗಳಲ್ಲಿ ಎಳನೀರು ಸಿಗುತ್ತಿಲ್ಲ. ತೆಂಗಿನ ಕಾಯಿ ಬೆಲೆ ಹೆಚ್ಚಳದಿಂದ ರೈತರು ಕಾಯಿ ಮಾಡಿ ಮಾರುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರಿದರೆ ಬೇಸಿಗೆಯಲ್ಲಿ ಮತ್ತಷ್ಟು ದರ ಹೆಚ್ಚಾಗಲಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಜಿಲ್ಲೆಯ ನಂಜನಗೂಡು, ತಿ. ನರಸೀಪುರ, ಹುಣಸೂರು, ಕೆ. ಆರ್. ನಗರ, ಪಿರಿಯಾಪಟ್ಟಣ ಸೇರಿದಂತೆ ಮಂಡ್ಯ ಜಿಲ್ಲೆಯ ತೆಂಗಿನ ತೋಟ ಗಳಿಂದ ಎಳನೀರು ತಂದು ಮಾರುವ ಮಾರಾಟ ಗಾರರ ಪ್ರಕಾರ ಬೇಸಿಗೆ ಬರುವ ಮೊದಲೇ ಎಳನೀರು ಪೂರೈಕೆ ಕಡಿಮೆಯಾಗಿದೆ. ಇದರಿಂದ ಈಗಾಗಲೇ ಒಂದು ಎಳನೀರಿಗೆ ೬೦ ರೂ. ಬೆಲೆ ಇದೆ. ಮುಂದಿನ ವಾರಗಳಲ್ಲಿ ಮಳೆ ಸುರಿಯದಿದ್ದರೆ ೭೦-೮೦ ರೂ. ಏರಬಹುದು ಎಂದು ನಂಜುಮಳಿಗೆಯಲ್ಲಿ ಎಳನೀರು ವ್ಯಾಪಾರ ಮಾಡುತ್ತಿರುವ ಬನ್ನೂರಿನ ಸ್ವಾಮಿ ಹೇಳುತ್ತಾರೆ.
ತೆಂಗಿಗೆ ರೋಗಬಾಧೆ: ಕಳೆದ ಬೇಸಿಗೆಯ ಒಣ ಹವಾಮಾನವು ತೆಂಗಿನಕಾಯಿಯ ಪ್ರಸ್ತುತ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಹೊಸ ಹೂ ಬಿಡುವ ಋತುವಿನಲ್ಲಿ ಇಳುವರಿಯೂ ಕಡಿಮೆಯಾಗುತ್ತಿದೆ.
ಬಿಸಿಲಿನ ಬೇಗೆಗೆ ತೆಂಗಿನ ಗರಿಗಳು ಬಾಡುತ್ತಿವೆ. ಕಾಯಿಗಳಿಗೆ ನುಸಿ ರೋಗದ ಕಾಟ ಹೆಚ್ಚಾಗಿದೆ. ೫೦ ಕಾಯಿ ಬಿಡುವ ಮರ ಕೇವಲ ೧೦ ಕಾಯಿಗಳನ್ನು ಬಿಡುತ್ತಿದೆ. ತೆಂಗಿನ ದರವೂ ಹೆಚ್ಚಿದೆ. ದುಂಬಿಗಳ ಕಾಟ ಜಾಸ್ತಿಯಾಗಿ ಮರಗಳು ಹಾಳಾಗುತ್ತಿವೆ. ಹೀಗಾಗಿ ದರ ಹೆಚ್ಚಾಗಿದೆ ಎಂದು ನಾಗನಹಳ್ಳಿಯ ರೈತ ಚಂದ್ರಶೇಖರ್ ಹೇಳಿದರು.





