Mysore
20
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

೨ನೇ ಬಾರಿಗೆ ಸಿಎಂ ಚಿನ್ನದ ಪದಕ ಪಡೆದ ರಮೇಶ್ ರಾವ್

ಮಂಜು ಕೋಟೆ

ಎಚ್.ಡಿ.ಕೋಟೆ: ಪಟ್ಟಣದ ವಾಸಿ ಪೊಲೀಸ್ ಮುಖ್ಯಪೇದೆ ರಮೇಶ್ ರಾವ್ ಎರಡನೇ ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ಪಟ್ಟಣದ ಹನುಮಂತನಗರದ ನಿವಾಸಿ ರಮೇಶ್ ರಾವ್ ರವರು ನಕ್ಸಲ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ರಾಜ್ಯ ಸರ್ಕಾರವು ಇವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಘೋಷಣೆ ಮಾಡಿದ್ದು, ಈ ಮೂಲಕ ಎರಡನೇ ಬಾರಿಗೆ ಮುಖ್ಯಮಂತ್ರಿ ಪದಕವನ್ನು ಗಳಿಸಿದಂತಾಗಿದೆ. ಏ.೨ರಂದು ಬೆಂಗಳೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಲಿದ್ದಾರೆ.

ಬಡತನದಲ್ಲಿ ಜೀವನ ಮಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿ ವಿವಿಧೆಡೆ ಕೆಲಸ ನಿರ್ವಹಿಸಿ ನಂತರ ಪೊಲೀಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ರಾವ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿ, ನಕ್ಸಲ್ ತಂಡದ ನಾಯಕನಾದ ನಕ್ಸಲ್ ರವೀಂದ್ರ ಪತ್ತೆಗಾಗಿ ಮಾರುವೇಷದಲ್ಲಿ ತಿಂಗಳಾನುಗಟ್ಟಲೆ ಮನೆ ಬಿಟ್ಟು ಶೃಂಗೇರಿ, ಕುದುರೆ ಮುಖ, ಆಗುಂಬೆ, ಉಡುಪಿ ಜಿಲ್ಲೆಗಳ ದಟ್ಟವಾದ ಕಾಡಿನಲ್ಲಿ ಗುಪ್ತವಾಗಿ ಓಡಾಡಿಕೊಂಡು ಮಾಹಿತಿ ಕಲೆಹಾಕಿ ಕೋಟೆ ಹೊಂಡದ ಬಳಿ ರವೀಂದ್ರ ಬರುವ ಕುರಿತು ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ರಮೇಶ್ ರಾವ್‌ರವರು ಕಾಡಿನಲ್ಲಿ ರವೀಂದ್ರನನ್ನು ಭೇಟಿ ಮಾಡಿ ಶರಣಾಗತಿಗೆ ಮನವೊಲಿಸಿದ್ದರು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಘೋಷಣೆ ಮಾಡಿದೆ. ಈ ಹಿಂದೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನೇಕ ದರೋಡೆ, ಕೊಲೆ, ಕಳ್ಳತನ ಇನ್ನಿತರ ಪ್ರಕರಣಗಳನ್ನು ಭೇದಿಸಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ರಾವ್ ಅವರಿಗೆ ೨೦೧೨ರಲ್ಲಿ ಪ್ರಪ್ರಥಮವಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿತ್ತು. ಇದು ಕೋಟೆಗೆ ಲಭಿಸಿದ ಪ್ರಥಮ ಪದಕವಾಗಿತ್ತು. ಈಗ ೨ನೇ ಬಾರಿ ಪದಕ ಗಳಿಸಿರುವುದು ಜಿಲ್ಲೆ ಮತ್ತು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.

Tags:
error: Content is protected !!