ಶೈಲಜಾ ವೇಣುಗೋಪಾಲ್, ಮೈಸೂರು
ಈ ಜೂನ್ ೧೧ಕ್ಕೆ ಪಂಡಿತ್ ರಾಜೀವ್ ತಾರಾನಾಥರು ನಮಗೆಲ್ಲಾ ವಿದಾಯ ಹೇಳಿ ಒಂದು ವರ್ಷ ಕಳೆಯುತ್ತದೆ. ಕಲೆಯೆನ್ನುವುದು ವ್ಯಾಪಾರವಾಗಿ, ಮನುಷ್ಯ ಸಂಬಂಧಗಳೆಲ್ಲಾ ವ್ಯವಹಾರವಾಗಿ, ಜಾತಿ, ಮತ, ಕುಲಗಳೆಲ್ಲವೂ ಬಲು ಗಟ್ಟಿಯಾದ ಗೋಡೆಗಳಾಗಿ, ಒಬ್ಬರಿಗೆ ಇನ್ನೊಬ್ಬರ ದನಿಯೇ ಕೇಳದಂತಾಗಿ, ಪಾಂಡಿತ್ಯ, ಕೌಶಲ, ಜಾಣ್ಮೆಗಳೆಲ್ಲಾ ಅಧಿಕಾರ ಪಡೆವ ಸಾಧನಗಳಾಗಿ, ದ್ವೇಷ ಅನುಮಾನ ತುಂಬಿರುವ, ಶತ್ರು ಯಾರೋ, ಮಿತ್ರ ಯಾರೋ ಎಂದು ತಿಳಿಯದಾಗಿರುವ ಈ ಕತ್ತಲಿನಲ್ಲಿ, “ಪ್ರೀತಿ ಎಂದರೇನು, ಕಾಳಜಿ ಮಾಡೋದಲ್ವೇನ್ರೀ?” ಎಂದು ಮಿಂಚು ಹೊಳೆಯಿಸುವ, ಗುಡುಗಿನಷ್ಟು ಗಾಢವಾದ ದನಿಯಲ್ಲಿ ಕೇಳುತ್ತಿದ್ದರು ರಾಜೀವ ತಾರಾನಾಥರು. ಅಂತಹ ಮಾನವ ಪ್ರೀತಿಯ ಜೀವ ಇಂತಹ ಕತ್ತಲಿನಲ್ಲಿ ನಿಜವಾಗಿಯೂ ಒಂದು ಆಶಾಕಿರಣವಾಗಿತ್ತು. ಹೂವು ತರುತ್ತಿದ್ದ ಸುರೇಶನಿಂದ ಮೊದಲ್ಗೊಂಡು ಅಡುಗೆ ಮಾಡಿಕೊಡುತ್ತಿದ್ದ ಲಕ್ಷ್ಮೀ, ಕಾರಿನ ಚಾಲಕ, ಸೊಪ್ಪಜ್ಜಿಯ ಮೊಮ್ಮಕ್ಕಳು ಎಲ್ಲರನ್ನೂ ಕಾಳಜಿ ಮಾಡುತ್ತಿದ್ದ ಪ್ರೀತಿಯ ರಾಜೀವ ತಾರಾನಾಥರು.
ಅವರೆಲ್ಲರ ಪ್ರತಿಭೆಯನ್ನು, ಮನೆಯ ಮಕ್ಕಳ ಪ್ರತಿಭೆಯನ್ನು ಪೋಷಿಸುವಂತೆಯೇ ಪ್ರೋತ್ಸಾಹಿಸುತ್ತಿದ್ದರು. ಬದುಕಿಗೇ ಅಂಟಿಕೊಳ್ಳದೆ, ಸಂಗೀತವನ್ನೂ ಬದುಕಿನಿಂದ ದೂರ ಒಯ್ದು, ವ್ಯಾಪಾರದ ಸರಕಾಗಿಸುತ್ತಿರುವ ಕಲಾವಿದರ ನಡುವೆ ಸ್ವಾಮಿ ಹರಿದಾಸರ ಪರಂಪರೆಯನ್ನು ಮುಂದುವರಿಸಿದ ಜೀವ ಪ್ರೀತಿಯ ಕಲಾವಿದರು ಪಂಡಿತ್ ರಾಜೀವ್ ತಾರಾನಾಥರು. ಸಂಗೀತ ಅವರ ಕಣ್ಣಾಗಿತ್ತು,
ಕಿವಿಯಾಗಿತ್ತು, ಮನಸ್ಸು ಮತ್ತು ಬುದ್ಧಿ ಆಗಿತ್ತು. ಎಲ್ಲವನ್ನೂ ಅವರು ಗ್ರಹಿಸುತ್ತಿದ್ದ ಮಾಧ್ಯಮವೂ ಆಗಿತ್ತು. ಇವೆಲ್ಲವನ್ನೂ ಪುಟವಿಟ್ಟ ಬಂಗಾರವನ್ನಾಗಿಸಿ, ಸಾಣೆ ಹಿಡಿದ ವಜ್ರದಂತೆ ಹೊಳೆಯಿಸಿದವರು ಅವರ ಅಪರೂಪದ ಗುರು ಉಸ್ತಾದ್ ಅಲಿ ಅಕ್ಬರ್‌ಖಾನ್. ರಿಯಾಜ್‌ನ ಮಹತ್ವವನ್ನು, ನಿರಂತರ ಹುಡುಕಾಟದ ಮನಸ್ಥಿತಿಯನ್ನು ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯವನ್ನೂ ಅವರಿಗೆ ಕಲಿಸಿದ ಗುರು ಖಾನ್ ಸಾಹೇಬರು. ಗುರು ಕಲಿಸಿದ ವಿದ್ಯೆಯನ್ನು ನಿರಂತರ ಮುಂದೆ ಒಯ್ಯುತ್ತಾ, ಹುಡುಕಾಟದ ಮನಸ್ಥಿತಿಯನ್ನೂ ಕೊನೆಯತನಕ ಉಳಿಸಿಕೊಂಡವರು ರಾಜೀವ ತಾರಾನಾಥರು. ಗುರುವಿನಂತೆಯೇ ತಾರಾನಾಥರು ಕೂಡ ಸಂಗೀತ ಆಗುವ ಪ್ರಕ್ರಿಯೆಯನ್ನೇ ಸುಖಿಸುತ್ತಿದ್ದವರು.
ಉತ್ಪನ್ನದ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. “ಏನೋ ಒಂದು ಹೊಸದನ್ನು ಮಾಡೋಕ್ಕೆ ಅಂತ ಹೊರಡ್ತೀವಿ. ಕೆಲವು ಸರ್ತಿ ಸಿಕ್ಕೇ ಬಿಡುತ್ತೆ, ಮತ್ತೆ ಕೆಲವು ಸರ್ತಿ, ಇನ್ನೇನು ಸಿಕ್ಕೇ ಬಿಡ್ತು ಅನ್ನುವಾಗ ಹೊರಟು ಹೋಗುತ್ತೆ. ಆದರೆ ಆ ಪ್ರಯತ್ನದಲ್ಲಿಯೇ ಎಂಥ ಖುಷಿ ಇರುತ್ತೆ ಅಲ್ವಾ?” ಅಂತ ಒಮ್ಮೆ ಹೀಗೇ ಮಾತನಾಡುತ್ತಾ ಹೇಳಿದ್ದರು. ಈ ನಿರಂತರ ಹುಡುಕಾಟ ಅವರನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಯಿತು.
ಅವರು ಅಭಿಜಾತ ಸಂಗೀತದ ಸಾಧ್ಯತೆಗಳನ್ನು ಸಿನಿಮಾ, ನಾಟಕ, ಹಿನ್ನೆಲೆ ಸಂಗೀತ, ಹೀಗೆ ಹಲವು ವಿಭಿನ್ನ ಮಾಧ್ಯಮಗಳಲ್ಲಿ ಶೋಧಿಸಿದರು. ಕೆಲವು ಕಾಲ ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಧ್ಯಾಪಕರಾಗಿದ್ದರು. ಸಂಸ್ಕಾರ ಚಿತ್ರಕ್ಕೆ ಅವರು ಮಾಡಿದ ಸಂಗೀತ ಕನ್ನಡ ಚಿತ್ರರಂಗದ ಹಿನ್ನೆಲೆಯಲ್ಲಿ ಸಂಗೀತ ವಿಭಾಗದಲ್ಲಿ ಹೊಸದೊಂದು ಅಧ್ಯಾಯ ತೆರೆಯಿತು. ಲಂಕೇಶರ ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ ಚಿತ್ರಗಳಿಗೆ ಸಂಗೀತ ನೀಡುವಾಗ ಸಿದ್ಧ ಫಾರ್ಮುಲಾಗಳನ್ನು ಒಡೆಯಲು ಪ್ರಯತ್ನಿಸಿದರು. ಶೃಂಗಾರ ಮಾಸ ಚಲನಚಿತ್ರಕ್ಕೆ ಅವರು ರಾಗ ಸಂಯೋಜಿಸಿದ ಬೇಂದ್ರೆಯವರ ಕವನ ‘ಬಂತಿದೋ ಶೃಂಗಾರ ಮಾಸ’ ಆಲ್‌ಟೈಮ್ ಕ್ಲಾಸಿಕ್. ಅಂತೆಯೇ ಮಲೆಯಾಳಂನ ಕಾಂಚನ ಸೀತಾ, ಪೂಕ್ಕುವಯಿಲ್ ಇವೆಲ್ಲ ಚಿತ್ರಗಳೂ ಪ್ರಶಸ್ತಿಗಳನ್ನು ದೋಚಿದವು. ರಾಜೀವ ತಾರಾನಾಥರ ಅಳಲು ಏನೆಂದರೆ “ಕೊಟ್ಟಿರುವ ಸಂಗೀತವನ್ನೇ ಐದ್ಸಲ ಕೊಟ್ಟು, ಆರ‍್ಸಲ ಕೊಟ್ಟು, ನೂರಾರ‍್ಸಲ ಕೊಟ್ಟು, ಪ್ರೇಕ್ಷಕರಿಗೆ ಅದೇ ಬೇಕೂಂತ ಅನ್ನಿಸಿಬಿಡಲಾಗಿದೆ. ಪ್ರೇಕ್ಷಕನನ್ನುChallenge ಮಾಡುವುದರ ಮೂಲಕ ಅವನ ಅಭಿರುಚಿಯನ್ನು ಚುರುಕುಗೊಳಿಸಬೇಕಾಗುತ್ತೆ. ಅದರ ಜವಾಬ್ದಾರಿ ನಮ್ಮದು, ನಿಮ್ಮದು” ಎನ್ನುತ್ತಿದ್ದರು.
ಜಾಡಿಗೆ ಬೀಳದೆ ಸದಾ ಹೊಸ ಸವಾಲುಗಳನ್ನು ಹಾಕಿಕೊಳ್ಳುತ್ತಾ ಸೃಜನಶೀಲತೆಯನ್ನು ಪಣಕ್ಕೆ ಒಡ್ಡಿಕೊಳ್ಳುತ್ತಿರಬೇಕು ಎನ್ನುವುದು ಅವರ ನಿಲುವಾಗಿತ್ತು. “ಗುರುಗಳು ದಿನಾ ಬೆಳಿಗ್ಗೆ ತಮ್ಮ ರಿಯಾಜ್ ನಟ್‌ಭೈರವ್ ರಾಗದಿಂದಲೇ ಪ್ರಾರಂಭಿಸುತ್ತಿದ್ದರು. ಆದರೆ ಅದು ಪ್ರತಿ ದಿನವೂ ಬೇರೆಯಾಗಿರುತ್ತಿತ್ತು. ಅವರು ಸರೋದ್ ಮತ್ತು ಸಂಗೀತ ಎರಡನ್ನೂ ತಮ್ಮ ಸಮಕಾಲೀನರಿಗಿಂತ ತುಂಬಾ ಮುಂದಕ್ಕೆ ಕೊಂಡೊಯ್ದರು” ಎನ್ನುತ್ತಿದ್ದರು. ೧೫ ವರ್ಷಗಳ ಕಾಲ ಅವರಲ್ಲಿ ಶಿಷ್ಯ ವೃತ್ತಿ ಮಾಡಿದ ಸಚಿನ್ ಹಂಪಿ. ಒಮ್ಮೆ ಹೀಗೆ ಮಾತನಾಡುತ್ತಾ, “ಈಗ ಮತ್ತೊಮ್ಮೆ ಸಂಸ್ಕಾರ ಚಿತ್ರಕ್ಕೆ ಸಂಗೀತ ಸಂಯೋಜಿಸು ಅಂತ ಕೇಳಿದರೆ ನಾನು ಬೇರೆಯೇ ರೀತಿಯಲ್ಲಿ ಸಂಯೋಜಿಸುತ್ತೇನೆ” ಎಂದಿದ್ದರು
ಸರ್. ಇಷ್ಟಾಗಿಯೂ ಅವರಂತೆ ನಿಷ್ಠೂರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬಲ್ಲ ವ್ಯಕ್ತಿಗಳು ಸಿಗುವುದು ಕಷ್ಟ. ಸಿನಿಮಾಕ್ಕೆ ಸಂಗೀತ ನೀಡುವ ಒಬ್ಬ ಅಪ್ಪಟ ಶಾಸ್ತ್ರೀಯ ಸಂಗೀತಗಾರನ ಮಿತಿಯನ್ನು ಅವರು ಗುರುತಿಸಿಕೊಂಡಿದ್ದರು. ಅಂತೆಯೇ ಸ್ಟುಡಿಯೋದಲ್ಲಿ ವಾದ್ಯಗಳ ಮಧ್ಯೆಯೇ ಬೆಳೆಯುವ ಎ.ಆರ್. ರಹಮಾನ್, ಇಳೆಯರಾಜ, ಹಂಸಲೇಖಾ, ಆರ್.ಡಿ.ಬರ್ಮನ್ ಅವರ ಎಣೆಯಿಲ್ಲದ ಸೃಜನಶೀಲತೆಯನ್ನೂ ಮತ್ತು ವಿಭಿನ್ನ ವಾದ್ಯಗಳನ್ನು ದುಡಿಸಿಕೊಳ್ಳಬಲ್ಲ ಸಾಮರ್ಥ್ಯವನ್ನೂ ಅವರು ಸೊಗಸಾಗಿ ಗುರುತಿಸಿದ್ದರು. ಇದರಿಂದಾಗಿಯೇ ಅವರ ಸಂಗೀತ ತಾಜಾ ಹಾಗೂ ಸೃಜನಶೀಲವಾಗಿರುತ್ತದೆ ಎನ್ನುತ್ತಿದ್ದರು.
ಪಂಡಿತ್ ರಾಜೀವ್ ತಾರಾನಾಥರು ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಷ್ಠ ಗುರು ಎನ್ನುವುದು ನಿತ್ಯ ಸತ್ಯಗಳಲ್ಲಿ ಒಂದು. ಯಾವುದೇ ವಿಷಯವಿರಲಿ ಅವರ ಮಾತನ್ನು, ವಿವರಣೆಯನ್ನು ಒಮ್ಮೆ ಕೇಳಿದರೆ ಅದು ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತಿತ್ತು. ೧೯೬೩-೬೫ ಅಂದರೆ ೬೦ ವರ್ಷಗಳ ಹಿಂದೆ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಯಲ್ಲಿ ಅವರ ವಿದ್ಯಾರ್ಥಿಗಳಾಗಿದ್ದ ಹಲವರು ಅವರ ಬೋಧನೆ ಹೇಗಿತ್ತು ಮತ್ತು ಅದು ತಮ್ಮ ಬದುಕನ್ನು ಹೇಗೆ ಬದಲಿಸಿತು ಎನ್ನುವುದನ್ನು ಇದೇ ಜೂನ್ ಹನ್ನೊಂದರಂದು ‘ಎಪಿಫೆನಿ’ ಎನ್ನುವ ಶೀರ್ಷಿಕೆಯಲ್ಲಿ ಹೊರ ತರುತ್ತಿರುವುದು ಇದಕ್ಕೆ ಭರ್ಜರಿ ಸಾಕ್ಷಿ. ರಾಜೀವ ತಾರಾನಾಥರು ಇಲ್ಲದಿದ್ದಲ್ಲಿ ಸಂಗೀತಕ್ಕಾಗಿಯೇ ಮೀಸಲಾಗಿರುವ ರಾಗಮಾಲಾ ಪ್ರಕಾಶನ ಹುಟ್ಟುತ್ತಲೇ ಇರಲಿಲ್ಲ. ಅವರಿಗೆ ಬೋಧನೆ ಒಂದು ತಪಸ್ಸಾಗಿತ್ತು. ಅವರಲ್ಲಿ ಸರೋದ್ ಮತ್ತು ಸಿತಾರ್ ಕಲಿಯುತ್ತಿದ್ದ ಹಲವು ವಿದ್ಯಾರ್ಥಿಗಳು ಇದ್ದರು. ಅದರಲ್ಲಿ ಹಲವು ವಿದೇಶಿ ವಿದ್ಯಾರ್ಥಿಗಳೂ ಇದ್ದರು.
ಯಾರಿಂದಲೂ ಎಂದೂ ಯಾವ ಶುಲ್ಕವನ್ನೂ ಸರ್ ಪಡೆದಿರಲಿಲ್ಲ. ಬದಲಾಗಿ ಅವರನ್ನು ಮನೆಯಲ್ಲಿ ಇಟ್ಟುಕೊಂಡು ಪ್ರೀತಿಯಿಂದ ಊಟ ಹಾಕಿ, ಕಾಳಜಿ ಮಾಡಿ ವಿದ್ಯೆ ಕಲಿಸಿ ಒಡಲು, ಬುದ್ಧಿ ಎರಡನ್ನೂ ತಂಪಾಗಿಸುತ್ತಿದ್ದರು. ಸರ್, ನೀವಿಲ್ಲದೆ ಬದುಕು ತುಂಬಾ ಖಾಲಿ ಖಾಲಿ…
ಸಂಸ್ಕಾರ ಚಿತ್ರಕ್ಕೆ ಅವರು ಮಾಡಿದ ಸಂಗೀತ ಕನ್ನಡ ಚಿತ್ರರಂಗದ ಹಿನ್ನೆಲೆಯಲ್ಲಿ ಸಂಗೀತ ವಿಭಾಗದಲ್ಲಿ ಹೊಸದೊಂದು ಅಧ್ಯಾಯ ತೆರೆಯಿತು. ಲಂಕೇಶರ ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ ಚಿತ್ರಗಳಿಗೆ ಸಂಗೀತ ನೀಡುವಾಗ ಸಿದ್ಧ ಫಾರ್ಮುಲಾಗಳನ್ನು ಒಡೆಯಲು ಪ್ರಯತ್ನಿಸಿದರು. ಶೃಂಗಾರ ಮಾಸ ಚಲನಚಿತ್ರಕ್ಕೆ ಅವರು ರಾಗ ಸಂಯೋಜಿಸಿದ ಬೇಂದ್ರೆಯವರ ಕವನ ‘ಬಂತಿದೋ ಶೃಂಗಾರ ಮಾಸ’ ಆಲ್‌ಟೈಮ್ ಕ್ಲಾಸಿಕ್. ಅಂತೆಯೇ ಮಲೆಯಾಳಂನ ಕಾಂಚನ ಸೀತಾ, ಪೂಕ್ಕುವಯಿಲ್ ಇವೆಲ್ಲ ಚಿತ್ರಗಳೂ ಪ್ರಶಸ್ತಿಗಳನ್ನು ಬಾಚಿದವು. ರಾಜೀವ ತಾರಾನಾಥರ ಅಳಲು ಏನೆಂದರೆ “ಕೊಟ್ಟಿರುವ ಸಂಗೀತವನ್ನೇ ಐದ್ಸಲ ಕೊಟ್ಟು, ಆರ‍್ಸಲ ಕೊಟ್ಟು, ನೂರಾರ‍್ಸಲ ಕೊಟ್ಟು, ಪ್ರೇಕ್ಷಕರಿಗೆ ಅದೇ ಬೇಕೂಂತ ಅನ್ನಿಸಿಬಿಡಲಾಗಿದೆ. ಪ್ರೇಕ್ಷಕನನ್ನು Challange ಮಾಡುವುದರ ಮೂಲಕ ಅವನ ಅಭಿರುಚಿಯನ್ನು ಚುರುಕುಗೊಳಿಸಬೇಕಾಗುತ್ತೆ. ಅದರ ಜವಾಬ್ದಾರಿ ನಮ್ಮದು, ನಿಮ್ಮದು” ಎನ್ನುತ್ತಿದ್ದರು.
ಇಂದು ಪಂ. ರಾಜೀವ ತಾರಾನಾಥರ ಪುಣ್ಯಸ್ಮರಣೆ ಮೈಸೂರು: ವಿಶ್ವ ಖ್ಯಾತಿಯ ಸರೋದ್ ವಾದಕರಾದ ಪಂಡಿತ್ ರಾಜೀವ ತಾರಾನಾಥರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಪಂಡಿತ್ ರಾಜೀವ ತಾರಾನಾಥಸ್ಮಾರಕ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೂ.೧೧ರಂದು ಸಂಜೆ ೬ಕ್ಕೆ ಮೈಸೂರಿನ ಕುವೆಂಪುನಗರದ ಗಾನಭಾರತೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಖ್ಯಾತ ಲೇಖಕಿ ಸುಮಂಗಲಾ, ಪ್ರಸಿದ್ಧ ತಬಲಾ ವಾದಕ ಪಂಡಿತ್ ಉದಯ್ ರಾಜ್ ಕರ್ಪೂರ, ರಂಗಭೂಮಿಕಲಾವಿದರಾದ ಇಂದಿರಾ ನಾಯರ್ ಮತ್ತಿತರರು ನುಡಿನಮನ ಸಲ್ಲಿಸಲಿದ್ದಾರೆ. ನಂತರ ವಿದುಷಿ ಸಹನಾ ಅವರ ಕರ್ನಾಟಕ ಸಂಗೀತದ ವೀಣಾ ವಾದನ ಪ್ರಸ್ತುತಗೊಳ್ಳಲಿದೆ. ವಿದ್ವಾನ್ ಕೆ.ಯು.ಜಯ ಚಂದ್ರ ರಾವ್ ಮೃದಂಗದಲ್ಲಿ ಹಾಗೂ ವಿದ್ವಾನ್ ಜಿ.ಎಸ್. ರಾಮಾನುಜನ್ ಘಟದಲ್ಲಿ ಸಹಕಾರ ನೀಡಲಿದ್ದಾರೆ.





