Mysore
26
scattered clouds

Social Media

ಶನಿವಾರ, 10 ಜನವರಿ 2026
Light
Dark

ಕದಳಿ ಮಹಿಳಾ ವೇದಿಕೆಗೆ ರಜತ ಸಂಭ್ರಮ

ಚಿರಂಜೀವಿ ಸಿ. ಹುಲ್ಲಹಳ್ಳಿ

೨೫ ವರ್ಷಗಳಿಂದ ಸಾಮಾಜಿಕಸೇವಾ ಕಾರ್ಯನಿರತ ಮಹಿಳೆಯರು

ಪ್ರತಿವರ್ಷ ಕದಳಿ ಪ್ರಶಸ್ತಿ ಕೊಡಮಾಡುತ್ತಿರುವ ವೇದಿಕೆ

‘ಹೆ ಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ’ ಎಂಬ ಮಾತಿದೆ. ಕಲಿತ ಹಲವು ಮಹಿಳೆಯರು ಒಟ್ಟಾಗಿ ಸೇರಿ ೨೫ ವರ್ಷಗಳ ಹಿಂದೆ ವೇದಿಕೆಯೊಂದನ್ನು ರಚಿಸಿಕೊಂಡು ಸಮಾಜದ ಏಳಿಗೆಗೆ, ಮಾನವೀಯ ಮೌಲ್ಯಗಳ ಮರುಸ್ಥಾಪನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ವಿದ್ಯಾ ಮಂದಿರ ಎನ್ನಬಹುದು.

ಮಹಿಳಾ ಪುನಶ್ಚೇತನ ಶಿಬಿರ, ದತ್ತಿ ಉಪನ್ಯಾಸಗಳು ಮತ್ತು ಸಮಾಜ ಸೇವಾ ಕಾರ್ಯಗಳ ಮೂಲಕ ಮನೆ ಮಾತಾಗಿರುವ ಸಂಘಟನೆಯ ಹೆಸರು ಕದಳಿ ಮಹಿಳಾ ವೇದಿಕೆ. ಶ್ರೀಶೈಲದ ಪರ್ವತಗಳ ಸಾಲಿನಲ್ಲಿ ಪ್ರಕೃತಿ ಸೌಂದರ್ಯದ

ಗಣಿಯಾಗಿರುವ ಅಕ್ಕಮಹಾದೇವಿಯ ಐಕ್ಯ ಸ್ಥಳ ‘ಕದಳಿ’ ಹೆಸರಿನಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಸ್ಥಾಪನೆಯಾದ ವೇದಿಕೆಗೆ ಈಗ ರಜತ ಮಹೋತ್ಸವದ ಸಂಭ್ರಮ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು ಮಹಿಳೆಯರು ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲಿ ಎಂಬ ಮಹಾ ಉದ್ದೇಶದಿಂದ ಅಕ್ಕ ತಾನು ಐಕ್ಯವಾದ ‘ಕದಳಿ’ಯನ್ನು ಸಾಂಕೇತಿವಾಗಿಸಿ ಕದಳಿ ಮಹಿಳಾ ವೇದಿಕೆಯನ್ನು ಪ್ರಾರಂಭಿಸಿ,ಮಹಿಳೆಯರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ನೆರವಾದರು.

ಕದಳಿ ಎಂಬುದು ತನು, ಕದಳಿ ಎಂಬುದು ಮನ, ಕದಳಿ ಎಂಬುದು ವಿಷಯಂಗಳು, ರೂಪರಸಾದಿ ವಿಷ ಯಂಗಳು ನಾಶವಾಗುವುದರಿಂದ ಇವೆಲ್ಲವೂ ಕದಳಿ ಎಂದು ಅಕ್ಕಮಹಾದೇವಿ ಹೇಳಿದ್ದಾರೆ. ಈ ಧ್ಯೇಯದೊಂದಿಗೆ ೨೦೦೦ರ ಮೇ ೭ರಂದು ವೇದಿಕೆ ಸ್ಥಾಪಿತವಾಯಿತು. ವೇದಿಕೆಯ ಪ್ರಥಮ ಅಧ್ಯಕ್ಷರಾಗಿದ್ದ ಪ್ರೊ.ಜಗದಾಂಬ ಮಲ್ಲೇದೇವರು ಅತ್ಯಂತ ಕ್ರಿಯಾಶೀಲರಾಗಿ ಮುನ್ನಡೆಸಿದರು.

ಉದ್ಘಾಟನೆಗೊಂಡ ವರ್ಷವೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶ ನಡೆಸಿ ‘ನುಡಿ ಕೋಗಿಲೆ’ ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಯಿತು. ನಂತರದಲ್ಲಿ ಶರಣೆ ಎಂ.ಎ.ನೀಲಾಂಬಿಕಾ, ಕಲ್ಯಾಣಿ ನಟ ರಾಜಪ್ಪ, ಜಯಾಗೌಡ, ಶಾರದಾ ಶಿವಲಿಂಗಸ್ವಾಮಿ ಅವರು ಅಧ್ಯಕ್ಷರಾಗಿ ಕದಳಿ ರಥವನ್ನು ಮುನ್ನಡೆಸಿದರು. ವೇದಿಕೆ ಇದೀಗ ರಾಜ್ಯಾದ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ ಅಕ್ಕನ ಚಿಂತನೆಗಳನ್ನು ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ೨೩ ಮಹಿಳಾ ಬಳಗಗಳನ್ನು ಹೊಂದುವ ಮೂಲಕ ಎರಡೂವರೆ ದಶಕಗಳಿಂದ ಸಾರ್ಥಕ ಸೇವೆಯ ಜೊತೆಗೆ ಅನೇಕ ರಚನಾತ್ಮಕ ಕಾರ್ಯ ಕ್ರಮಗಳನ್ನು ನಿರ್ವಹಿಸಿದೆ. ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕದಳಿ ಸಮಾವೇಶ. ಪ್ರತಿಷ್ಠಿತ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ, ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ, ಪ್ರಸಾದ ನಿಲಯಗಳಲ್ಲಿ ಜ್ಞಾನ ಪ್ರಸಾರ, ಕೃತಿಗಳ ಪ್ರಕಟಣೆ, ಶರಣ ಕ್ಷೇತ್ರಗಳಿಗೆ ಪ್ರವಾಸ, ಕದಳಿ ಯಾತ್ರೆ, ವಿಶೇಷ ಮಾಸಿಕ ಕಾರ್ಯಕ್ರಮಗಳು, ಸಮಾಜ ಸೇವಾ ಕಾರ್ಯಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಾಂಸ್ಕೃತಿಕ ಕೇಂದ್ರವೆನಿಸಿದ ಮೈಸೂರಿನಲ್ಲಿ ಶರಣ ಸಂಸ್ಕೃತಿಯನ್ನೊಳಗೊಂಡ ೨೧ ಮಹಿಳಾ ಬಳಗಗಳು ಕದಳಿ ವೇದಿಕೆಯ ಜತೆಯಾಗಿ ಅರ್ಥಪೂರ್ಣ ಕಾರ್ಯ ಕ್ರಮಗಳನ್ನು ಮಾಡಲು ಸಹಕಾರಿಯಾಗಿವೆ.

ರಜತೋತ್ಸವಕ್ಕೆ ವಚನದ ಮೆರುಗು:  ರಜತ ಮಹೋತ್ಸವ ಸಂಭ್ರಮದ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಮನೆಮನೆಗೆ ಶರಣೆಯರ ಆಗಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ೨೫ ಉಪನ್ಯಾಸಕರು ೨೫ ಮನೆಗಳಲ್ಲಿ ವಚನಕಾರ್ತಿಯರ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಗೊ.ರು.ಪರಮೇಶ್ವರಪ್ಪ ಅವರ ಮನೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ವಚನಗಳು ಮೌಲ್ಯಗಳನ್ನು ಮನೆ-ಮನಕ್ಕೆ ತಲುಪಿಸುವ ಉದ್ದೇಶದಿಂದ ನಡೆಸಲಾಗಿದೆ ಎಂದು ವೇದಿಕೆ ಅಧ್ಯಕ್ಷರಾದ ಶಾರದಾ ಶಿವಲಿಂಗಸ್ವಾಮಿ ಹೇಳುತ್ತಾರೆ.

ಸಮಾಜ ಸೇವಾ ಕಾರ್ಯ:  ಆರೋಗ್ಯ ಕೇಂದ್ರಗಳಿಗೆ ಶುದ್ಧ ಕುಡಿಯುವ ಯಂತ್ರ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಬೀದಿಬದಿ ವ್ಯಾಪಾರಿಗಳಿಗೆ ಮಳೆ ಛತ್ರಿಗಳು, ಅಂಗವಿಕಲರಿಗೆ ವ್ಹೀಲ್‌ಚೇರ್ ನೀಡಿಕೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ವೇದಿಕೆ ವತಿಯಿಂದ ನಡೆಸಲಾಗಿದೆ.

ನಾಳೆ ರಜತೋತ್ಸವ ಸಮಾರಂಭ: 

ಮೈಸೂರು: ಕದಳಿ ಮಹಿಳಾ ವೇದಿಕೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಜು.೨೭ರಂದು ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕದಳಿ ಶ್ರೀ ಪ್ರಶಸ್ತಿ ಪ್ರದಾನದೊಂದಿಗೆ ರಜತೋತ್ಸವ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ವೈರಾಗ್ಯನಿಧಿ ಜಗದ ಸೋಜಿಗ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ರಜತ ಮಹೋ ತ್ಸವದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಡಾ. ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಉಪಸ್ಥಿತರಿರುವರು. ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್.ಪ್ರಸಾದ್ ಉದ್ಘಾಟಿಸುವರು. ‘ವೈರಾಗ್ಯನಿಧಿ -ಜಗದ ಸೋಜಿಗ’ ಕೃತಿಯನ್ನು ಹಿರಿಯ ಸಾಹಿತಿ ನಾಡೋಜ ಗೊ.ರು.ಚನ್ನಬಸಪ್ಪ ಬಿಡುಗಡೆಗೊಳಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ‘ಕದಳಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅ.ಭಾ.ಶ.ಸಾ.ಪ.ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು.

ಕದಳಿ ವೇದಿಕೆ ಪದಾಧಿಕಾರಿಗಳು: ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಶಾರದಾ ಶಿವಲಿಂಗಸ್ವಾಮಿ, ಉಪಾಧ್ಯಕ್ಷರಾಗಿ ಸುಧಾ ಮೃತ್ಯಂಜಯಪ್ಪ, ರಾಜೇಶ್ವರಿ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿಯಾಗಿ ವಾಗ್ದೇವಿ, ಸಹ ಕಾರ್ಯದರ್ಶಿಯಾಗಿ ಶೈಲಾ ಸಿದ್ದರಾಮಪ್ಪ, ಕೋಶಾಧ್ಯಕ್ಷರಾಗಿ ಸುಮಾಪ್ರಕಾಶ್, ಸಂಚಾಲಕರಾಗಿ ಉಮಾ ಮಹಾದೇವಸ್ವಾಮಿ, ಸಲಹೆಗಾರರಾಗಿ ಎಂ.ಎ.ನೀಲಾಂಬಿಕ, ಜಯಾ ಗೌಡ, ಶಶಿಕಲಾದೇವಿ ಕಾರ್ಯನಿರ್ವಹಿಸುತ್ತಿದ್ದಾರೆ.

Tags:
error: Content is protected !!