Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಇಂದು ಕೊಡಗಿನಲ್ಲಿ ಪುತ್ತರಿ ಹಬ್ಬದ ಸಂಭ್ರಮ

ಧಾನ್ಯಗಳನ್ನು ಮನೆಗೆ ತುಂಬಿಸಿಕೊಳ್ಳುವ ವಿಶಿಷ್ಟ ಆಚರಣೆ : ಸಂಭ್ರಮದ ಹಬ್ಬದ ಆಚರಣೆಗೆ ಸಜ್ಜಾದ ಜನತೆ

ನವೀನ್‌ ಡಿಸೋಜ

ಮಡಿಕೇರಿ: ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ಧಾನ್ಯಲಕ್ಷಿ ಯನ್ನು ಮನೆಗೆ ಸೇರಿಸಿಕೊಳ್ಳುವ ಸಂಭ್ರಮದ ಪುತ್ತರಿ ಹಬ್ಬಕ್ಕೆ ಕೊಡಗು ಸಜ್ಜಾಗಿದ್ದು, ಶನಿವಾರ ಹುಣ್ಣಿಮೆಯ ದಿನ ಕೊಡಗಿನಲ್ಲಿ ಪುತ್ತರಿ ಆಚರಣೆ ನಡೆಯಲಿದೆ.

ಜಿಲ್ಲೆಯಾದ್ಯಂತ ಪುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡಗಿನಲ್ಲಿ ಆಚರಿಸುವ ಕೆಲವು ಹಬ್ಬಗಳಲ್ಲಿ ಪುತ್ತರಿ ಹಬ್ಬ ಬಹಳ ಪ್ರಮುಖವಾದದ್ದು. ಕೊಡಗಿನ ಸುಗ್ಗಿ ಹಬ್ಬ ಎಂದೇ ಹೆಸರಾಗಿರುವ ಹುತ್ತರಿ ಹಬ್ಬವನ್ನು ಈ ಭಾಗದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕೇರಳದಲ್ಲಿ ಓಣಂ ಹಬ್ಬ ಕಳೆದು ಮೂರು ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ಈ ಹಬ್ಬವನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ಇನ್ನೂ ಮನೆಗಳನ್ನು ಸುಣ್ಣ ಬಣ್ಣದಿಂದ, ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗುತ್ತದೆ.

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮನೆ ಮಂದಿಯೆಲ್ಲಾ ಸಂಭ್ರಮದಿಂದ ಪಾಲ್ಗೊಂಡು ಆಚರಿಸುವ ಹುತ್ತರಿ ಹಬ್ಬ ಕೊಡಗಿನ ವಿಶೇಷ. ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ಮಾಡಿ ಬದುಕುವ ಬಹುತೇಕ ರೈತಾಪಿ ವರ್ಗ ಭತ್ತದ ಪೈರುಗಳು ಬೆಳೆದಾಗ ಶಾಸ್ತ್ರೋಕ್ತವಾಗಿ ಕದಿರು ಕುಯ್ದು ತಂದು ಮನೆ ತುಂಬಿಸಿಕೊಳ್ಳುವುದೇ ಈ ಪುತ್ತರಿ ಹಬ್ಬದ ವೈಶಿಷ್ಟ್ಯವಾಗಿದೆ.

ಮೊದಲು ಕುಟುಂಬದ ಹಿರಿಯ ಮನೆಮಂದಿಯೊಂದಿಗೆ ನೆರೆ ಕಟ್ಟುವ ಕಾರ್ಯದಲ್ಲಿ ತೊಡಗುತ್ತಾರೆ. ಆ ಬಳಿಕ ನಿಗದಿಪಡಿಸಿದ ಸಮಯಕ್ಕೆ ಗದ್ದೆಗೆ ತೆರಳಿ ಭತ್ತದ ಕದಿರುಗಳನ್ನು ಪೂಜಿಸಿ ಆ ಬಳಿಕ ಪೊಲಿ ಪೊಲಿಯೇ ದೇವಾ ಎಂದು ಕೂಗುತ್ತಾ ಶಾಸ್ತ್ರೋಕ್ತವಾಗಿ ಭತ್ತದ ಕದಿರನ್ನು ಕತ್ತರಿಸಿ ತಂದು ದೇವಾಲಯ ವನ್ನು, ಮನೆಯನ್ನು ತುಂಬಿಕೊಳ್ಳುತ್ತಾರೆ. ಮತ್ತೊಂದೆಡೆ ಮಕ್ಕಳು, ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಪುತ್ತರಿಯಂದು ರಾತ್ರಿ ಸಮಯದ ಪರಿವೆಯೇ ಇಲ್ಲದೆ ವಿಶೇಷ ಊಟೋಪಚಾರಗಳು ನಡೆಯುತ್ತವೆ. ಪುತ್ತರಿಯಂದು ಅಡುಗೆ ವೈವಿಧ್ಯಮಯವಾಗಿದ್ದು, ಬಾಳೆಹಣ್ಣಿನಿಂದ ತಯಾರಿಸಿದ ತಂಬಿಟ್ಟು ಖಾದ್ಯ ಸವಿಯಲಾಗುತ್ತದೆ.

ಜಿಲ್ಲೆಯ ಹಲವು ಭಾಗಗಳಲ್ಲಿ ಇಂತಹ ಹುತ್ತರಿ ಕೋಲಾಟ ಇಂದಿಗೂ ನಡೆಯುತ್ತದೆ. ಆದರೆ, ಕ್ರೀಡೆ, ಕುಣಿತಗಳು ವರ್ಷದಿಂದ ವರ್ಷಕ್ಕೆ ಗ್ರಾಮಾಂತರ ಪ್ರದೇಶಗಳಿಂದ ಕ್ಷೀಣಿಸಲಾರಂಭಿಸಿದೆ.

ಪುತ್ತರಿ ಆಚರಣೆಗೆ ದಿನ ನಿಗದಿ
ಪುತ್ತರಿಯನ್ನು ಶನಿವಾರ ಆಚರಿಸಲು ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಇತ್ತೀಚೆಗೆ ದಿನ ನಿಗದಿಪಡಿಸಲಾಗಿತ್ತು. ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಾಡಿನ ೧೩ ತಕ್ಕಮುಖ್ಯಸ್ಥರು, ದೇಗುಲದ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಪದಾಽಕಾರಿಗಳ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಅಮ್ಮಂಗೇರಿ ಜ್ಯೋತಿಷರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪುತ್ತರಿ ದಿನ ಮತ್ತು ಆಚರಣೆಗೆ ಸಮಯ ನಿಗದಿಪಡಿಸಿದ್ದಾರೆ. ಶನಿವಾರ ರಾತ್ರಿ ೭. ೩೦ಕ್ಕೆ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ನೆರೆ ಕಟ್ಟುವುದು, ೮. ೩೦ಕ್ಕೆ ಕದಿರು ಕೊಯ್ಯುವುದು ಮತ್ತು ೯. ೩೦ ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಆಚರಣೆ ಸಮಯ
ಸಂಪ್ರದಾಯದಂತೆ ಪಾಡಿ ಶ್ರೀ ಇಗ್ಗುತ್ತಪ್ಪದಲ್ಲಿ ಪ್ರಥಮವಾಗಿ ಪುತ್ತರಿ ಆಚರಣೆ ನಡೆದು ಬಳಿಕ ನಾಡಿನೆಲ್ಲೆಡೆ ಆಚರಿಸಲಾಗು ತ್ತದೆ. ಅದರಂತೆ ಪುತ್ತರಿಯಂದು ರಾತ್ರಿ ೭. ೫೦ಕ್ಕೆ ನೆರೆ ಕಟ್ಟುವುದು, ೮. ೫೦ಕ್ಕೆ ಕದಿರು ಕೊಯ್ಯುವುದು ಮತ್ತು ೯. ೫೦ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ.

 

Tags:
error: Content is protected !!