Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪುದುಕೋಟೆ ಹೆಂಗಳೆಯರಿಗೆ ಅಕ್ಷರ ಕಲಿಸಿದ ಸೈಕಲ್.!

ಪಂಜು ಗಂಗೊಳ್ಳಿ

ಕಾಲು ಶತಮಾನದ ಹಿಂದೆ, ತಮಿಳುನಾಡಿನ ಪುದುಕೋಟೆಯಲ್ಲಿ ಪುರುಷರು ಹೊರಗೆಲ್ಲೋ ಹೋಗಿ ಕೆಲಸ ಮಾಡುತ್ತಿದ್ದರೆ ಹೆಂಗಸರು ತಮ್ಮಮನೆಗಳ ಹೊರಗೆ ಕುಳಿತು ಬಟ್ಟೆ ಒಗೆಯುವುದೋ, ಬೆರಣಿ ತಟ್ಟುವುದೋ ಮಾಡುತ್ತಿದ್ದರು. ಒಂದು ದಿನ ಸೈಕಲ್ ಮೇಲೆ ಕುಳಿತ ಹೆಂಗಸರ ಗುಂಪೊಂದು ದೊಡ್ಡದೊಂದು ಬ್ಯಾನರ್ ಹಿಡಿದು ಪುದುಕೋಟೆಗೆ ಬಂದಿತು. ಆ ಬ್ಯಾನರಿನ ಮೇಲೆ ತಮಿಳಿನಲ್ಲಿ ‘ಅರಿವಳಿ (ಅರಿವು)’ ಎಂದು ದೊಡ್ಡದಾಗಿ ಬರೆದಿತ್ತು. ಆ ಹೆಂಗಸರ ಗುಂಪು ಸೈಕಲ್ ನಡೆಸುತ್ತ ಜೋರಾಗಿ ಒಂದು ಹಾಡನ್ನು ಹಾಡುತ್ತಿತ್ತು- ‘ಸೈಕಲ್ ಓಟ ಕತ್ತುಕಣುಂ ತಂಗಚ್ಚಿ, ವಾಲ್ಕ ಚಕ್ಕರತ್ತ ಸುತ್ತಿವಿಡು ತಂಗಚ್ಚಿ ಸೈಕಲ್ ಬಿಡುವುದು ಕಲಿತುಕೋ ತಂಗಿ, ಬದುಕಿನ ಚಕ್ರ ತಿರುಗಿಸು ತಂಗಿ. ಆ ಹಾಡಿನೊಂದಿಗೆ ಪುದುಕೋಟ್ಟೆಯ ಆ ಹೆಂಗಸರ ಬದುಕೂ ಬದಲಾಯಿತು.

ಇಂದು, ಅಂದರೆ, ಇಪ್ಪತ್ತೈದು ವರ್ಷಗಳ ನಂತರ ಪುದುಕೋಟೆಯಲ್ಲಿ ಎಲ್ಲಿ ನೋಡಿದರೂ ಹೆಂಗಸರು ಸೈಕಲ್ ಬಿಡುತ್ತ ಒಂದಿಲ್ಲೊಂದು ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಕೆಲವರು ತಮ್ಮ ಮಕ್ಕಳನ್ನು ಸೈಕಲಲ್ಲಿ ಕುಳ್ಳಿರಿಸಿಕೊಂಡು ಶಾಲೆಗೆ ಬಿಡಲು ಹೋಗುತ್ತಿದ್ದರೆ, ಇನ್ನು ಕೆಲವರು ಸೈಕಲ್ ಮೇಲೆ ಕೊಡಗಳನ್ನು ಬ್ಯಾಲನ್ಸ್ ಮಾಡಿಕೊಂಡು ನೀರು ತರುತ್ತಾರೆ. ಮತ್ತೂ ಕೆಲವರು, ಸೈಕಲ್‌ನ ಹಿಂದೆ ಕ್ಯಾರಿಯ‌ ಅಥವಾ ಮುಂದೆ ಬಾರಿನ ಮೇಲೆ ಹುಲ್ಲಿನ ಹೊರೆಯೋ, ಸೌದೆ ಕಟ್ಟನ್ನೋ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುತ್ತಾರೆ. ಮತ್ತೆ ಕೆಲವು ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರುತ್ತಾರೆ. ಇನ್ನು ಕೆಲವರು ಸೈಕಲ್ ಹೊಡೆಯುತ್ತ ದುಡಿಯಲು ಹೋಗುತ್ತಾರೆ..

ಸದ್ಯ ಭಾರತದ ಸಾಕ್ಷರತೆಯ ಪ್ರಮಾಣ ಸುಮಾರು ಶೇ.85.95. 1991ರ ಹೊತ್ತಿಗೆ ಇದು ಕೇವಲ ಶೇ.52.2 ಆಗಿತ್ತು. ಆಗಿನ ಕೇಂದ್ರ ಸರ್ಕಾರ ದೇಶದ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ‘ದಿ ನೇಷನಲ್ ಲಿಟರಸಿ ಮಿಷನ್’ನನ್ನು ಸ್ಥಾಪಿಸಿತ್ತು. ಆ ಮಿಷನ್ ವಯಸ್ಕ ಅನಕ್ಷರಸ್ಥರಿಗೆ ಓದಲು ಬರೆಯಲು ಬರುವಷ್ಟಾದರೂ ಸಾಕ್ಷರತೆ, ದಿನನಿತ್ಯದ ಕೆಲಸಗಳಿಗೆ ಬೇಕಾಗುವ ಸರಳ ಲೆಕ್ಕಾಚಾರ, ಮನಿಯಾರ್ಡರ್ ಪಡೆಯುವುದು, ಪತ್ರವನ್ನು ಅಂಚೆಯಲ್ಲಿ ಕಳಿಸುವುದು, ಸರ್ಕಾರಿ ನೌಕರರನ್ನು ಭೇಟಿಯಾಗುವುದು ಮೊದಲಾದ ಕೆಲಸಗಳನ್ನು ಮಾಡಲು ಬೇಕಾಗುವಷ್ಟು ಕಾರ್ಯಶೀಲತೆ ಮತ್ತು ನಾಗರಿಕ ಹಕ್ಕಿನ ಅರಿವು ಈ ನಾಲ್ಕು ಅಂಶಗಳನ್ನು ಗುರಿಯಾಗಿರಿಸಿಕೊಂಡು ತನ್ನ ಚಟುವಟಿಕೆಯನ್ನು ನಡೆಸುತ್ತಿತ್ತು.
ಪುದುಕೋಟೆಗೆ ಆಗ ಕಲೆಕ್ಟರ್ ಆಗಿದ್ದ ಶೀಲಾ ರಾಣಿ ಚುಂಕತ್‌ರವರು ಐದನೇ ಅಂಶವಾಗಿ ಚಲನಶೀಲತೆಯನ್ನು ಸೇರಿಸಿ, ತನ್ನ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಆಗ ಪುದುಕೋಟ್ಟೆಯ ಮಹಿಳಾ ಸಾಕ್ಷರತೆಯ ಪ್ರಮಾಣ ಕೇವಲ ಶೇ.38 ಆಗಿತ್ತು. ಜಿಲ್ಲೆಯ ಜನಸಂಖ್ಯೆಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಅನಕ್ಷರಸ್ಥರಾಗಿದ್ದು, ಅದರಲ್ಲಿ ಮಹಿಳೆಯರ ಪ್ರಮಾಣ ಶೇ.70 ಆಗಿತ್ತು.

ಚಲನಶೀಲತೆಗೆ ಚಕ್ರಕ್ಕಿಂತ ಮಿಗಿಲಾದ ಸಂಕೇತ ಮತ್ತೊಂದಿಲ್ಲ. ಶೀಲಾ ರಾಣಿ ಚುಂಕತ್ ಪುದುಕೋಟ್ಟೆಯ ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರ ಕಲಿಸುವ ಜೊತೆಯಲ್ಲಿ ಅವರ ಬದುಕಿಗೆ ಚಲನಶೀಲತೆಯನ್ನು ನೀಡಲು ಬಳಸಿದ್ದೇ ಈ ಸೈಕಲ್. ಎರಡು ಚಕ್ರಗಳನ್ನುಳ್ಳ ಶ್ರೀಸಾಮಾನ್ಯನ ಸೈಕಲ್ ಪುದುಕೋಟೆಯ ಹೆಂಗಸರಿಗೆ ಕೇವಲ ಸಂಕೇತವಾಗಿ ಮಾತ್ರವಲ್ಲದೆ, ಆ ಮಹಿಳೆಯರ ಬದುಕಿನ ಚಕ್ರವಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿತು. ಆ ಸೈಕಲ್ ಕ್ರಾಂತಿ ಪುದುಕೋಟೆಯ ಸುಮಾರು ಒಂದು ಲಕ್ಷ ಮಹಿಳೆಯರನ್ನು ಅಕ್ಷರಸ್ಥರನ್ನಾ ಗಿಸುವ ಮೂಲಕ ಅವರ ಬದುಕಿಗೆ ಅವರು ಊಹಿಸಲೂ ಸಾಧ್ಯವಾಗದಂತಹ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ನೀಡಿತು. ಪ್ರತಿದಿನ ಕಾಲು ನಡಿಗೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕೃಷಿಕೂಲಿಗಳು, ಕಲ್ಲು ಕ್ವಾರಿಯ ಕಾರ್ಮಿಕರು, ಗ್ರಾಮೀಣ ನರ್ಸುಗಳು ಹಾಗೂ ಅಂಗನವಾಡಿ ಕೆಲಸಗಾರರ ಕಾಲುಗಳಿಗೆ ಆ ಸೈಕಲ್ ಅಕ್ಷರಶಃ ಚಕ್ರಗಳನ್ನು ಜೋಡಿಸಿತು.

ಶೀಲಾ ರಾಣಿ ಚುಂಕತ್ ಬೇರೆ ಬೇರೆ ಹಳ್ಳಿಗಳ ಹೆಂಗಸರನ್ನು ಬ್ಲಾಕ್ ಲೀಡರ್ ಹಾಗೂ ಕೋ-ಆರ್ಡಿನೇಟರ್‌ಗಳನ್ನಾಗಿ ನೇಮಿಸಿ, ಅವರ ಸಹಾಯದಿಂದ ಪುದುಕೋಟೆಯಲ್ಲಿ ಸೈಕಲ್ ಕಲಿಸುವ ಆಂದೋಲನವನ್ನು ಪ್ರಾರಂಭಿಸಿದರು. ಸುಮಾರು 30 ಸಾವಿರ ಸ್ವಯಂ ಸೇವಕಿಯರು ಆ ಸೈಕಲ್ ಕ್ರಾಂತಿಯಲ್ಲಿ ಭಾಗಿಯಾದರು. ಚಿಕ್ಕ ಹೆಣ್ಣುಮಕ್ಕಳಿಂದ ಹಿಡಿದು ವಯಸ್ಕ ಮಹಿಳೆಯರವರೆಗೆ ರಸ್ತೆಗಳಲ್ಲಿ ಬಿದ್ದು ಎದ್ದು ಸೈಕಲ್ ನಡೆಸಲು ಕಲಿತರು. ಕೆಳಕ್ಕೆ ಬಿದ್ದರೂ ನಗುನಗುತ್ತಾ ಮೇಲೆದ್ದು ಮತ್ತೆ ಸೈಕಲ್ ಹಿಡಿಯುತ್ತಿದ್ದರು. ಆಗ ಸಾಮಾನ್ಯವಾಗಿ ಸೈಕಲ್‌ಗಳನ್ನು ಪುರುಷರಿಗಾಗಿ ತಯಾರಿಸಲಾಗುತ್ತಿತ್ತಾದುದರಿಂದ ಅವುಗಳಿಗೆ ಒಂದು ಅಡ್ಡ ಬಾ‌ ಇರುತ್ತಿತ್ತು. ಇದರಿಂದ ಮಹಿಳೆಯರಿಗೆ ಲಂಗ ಅಥವಾ ಸೀರೆ ಉಟ್ಟುಕೊಂಡು ಸೈಕಲ್ ಬಿಡುವುದು ಕಷ್ಟವಾಗುತ್ತಿತ್ತು. ಆದರೂ ಆ ಹೆಂಗಳೆಯರು ಹಿಂಜರಿಯಲಿಲ್ಲ. ತಮ್ಮ ಗಂಡಂದಿರು, ಅಪ್ಪಂದಿರು ಅಥವಾ ಅಣ್ಣತಮ್ಮಂದಿರ ಪ್ಯಾಂಟುಗಳನ್ನು ಧರಿಸಿ ಸೈಕಲ್ ಬಿಡುವುದನ್ನು ಕಲಿತರು. ಇನ್ನೊಬ್ಬಳಿಂದ ಸೈಕಲ್ ಬಿಡುವುದನ್ನು ಕಲಿತ ಮಹಿಳೆ ತಾನು ಬೇರೊಬ್ಬಳಿಗೆ ಕಲಿಸುವ ಮೂಲಕ ಸೈಕಲ್ ಕ್ರಾಂತಿ ಪುದುಕೋಟೆ ಜಿಲ್ಲೆಯಿಡೀ ವ್ಯಾಪಕವಾಗಿ ಹರಡಿತು.

ಹೆಂಗಸರು ಸೈಕಲ್ ಬಿಡುತ್ತೇನೆಂದರೆ ಗಂಡಸರು ಅದನ್ನು ನೋಡುತ್ತ ಸುಮ್ಮನಿರುತ್ತಾರೆಯೇ? ಹೆಂಗಸರು ಸೈಕಲ್ ಬಿಡುವುದನ್ನು ನೋಡಿ ಅವರು ಶಿಳ್ಳೆ ಹೊಡೆದರು, ಗೇಲಿ ಮಾಡಿದರು. ಗಂಡಸರ ಕುಚೇಷ್ಟೆಯಿಂದ ತಪ್ಪಿಸಿಕೊಳ್ಳಲು ಅನೇಕ ಹೆಂಗಸರು ರಾತ್ರಿ ಹೊತ್ತು ಸೈಕಲ್ ಬಿಡಲು ಕಲಿತರು. ಸೈಕಲ್ ಬಿಡುವ ಆಂದೋಲನ ತೀವ್ರಗೊಂಡಂತೆ, ಶೀಲಾ ರಾಣಿ ಪ್ರತಿಯೊಂದು ಹಳ್ಳಿಯಲ್ಲಿಯೂ ಸೈಕಲ್ ರೇಸ್‌ಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ, ಟ್ರೋಫಿಗಳನ್ನು ನೀಡಿ ಹುರಿದುಂಬಿಸಿದರು. ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿ ಮಹಿಳೆಯರಿಗೆ ಸೈಕಲ್ ಖರೀದಿಸಲು ಸುಲಭದಲ್ಲಿ ಸಾಲ ಸಿಗುವ ವ್ಯವಸ್ಥೆ ಮಾಡಿದರು. ಪುದುಕೋಟ್ಟೆಯ ಪ್ರತಿಯೊಬ್ಬ ಮಹಿಳೆಯೂ ಸೈಕಲ್ ಖರೀದಿಸಲು ಮುಂದಾದುದರಿಂದ ಮಾರುಕಟ್ಟೆಯಲ್ಲಿ ‘ಲೇಡಿಸ್ ಸೈಕಲ್‌’ನ ಕೊರತೆ ಕಾಣಿಸಿಕೊಂಡಿತು. ಆದರೂ, ಪುದುಕೋಟೆಯ ಮಹಿಳೆಯರು ಅದರಿಂದ ನಿರಾಶರಾಗದೆ ‘ಜಂಟ್ಸ್ ಸೈಕಲ್’ ಖರೀದಿಸಿದರು. ಬರುಬರುತ್ತ ಅವರು ಲೇಡಿಸ್ ಸೈಕಲ್‌ ಗಿಂತ ಜಂಟ್ ಸೈಕಲ್ಲನ್ನೇ ಹೆಚ್ಚು ಇಷ್ಟಪಡಲು ಶುರು ಮಾಡಿದರು. ಏಕೆಂದರೆ, ಜಂಟ್ಸ್ ಸೈಕಲಿನಲ್ಲಿ ಸೀಟು ಮತ್ತು ಹ್ಯಾಂಡಲ್ ನಡುವೆ ಇರುವ ಬಾರ್ ಮೇಲೆ ತಮ್ಮ ಮಕ್ಕಳನ್ನು ಕುಳ್ಳಿರಿಸಿಕೊಳ್ಳಲು ಅನುಕೂಲವಾಗುತ್ತಿತ್ತು ಎಂಬ ಕಾರಣಕ್ಕೆ.

ಮೊದಲೆಲ್ಲ ತಮ್ಮ ಮನೆಗಳೆದುರು ಕುಳಿತು ಬಟ್ಟೆ ಒಗೆಯುತ್ತಲೋ, ಬೆರಣಿ ತಟ್ಟುತ್ತಲೋ ತಮ್ಮ ಬಿಡುವಿನ ಸಮಯ ಕಳೆಯುತ್ತಿದ್ದ ಪುದುಕೋಟೆಯ ಹೆಂಗಸರು ಈಗ ಸೈಕಲ್ ಏರಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಲು ಪೇಟೆಗೆ ಹೋಗುತ್ತಾರೆ. ಭತ್ತದ ಚೀಲ ಹೇರಿಕೊಂಡು ಮಲ್ಲಿಗೆ ಹೋಗುತ್ತಾರೆ. ಒಲೆ ಉರಿಸಲು ಸೌದೆ ಹೇರಿಕೊಂಡು ಬರುತ್ತಾರೆ. ಜಾನುವಾರುಗಳಿಗೆ ಮೇವು ತುಂಬಿಕೊಂಡು ಬರುತ್ತಾರೆ. ಮೊದಲೆಲ್ಲ ನಡೆದು ಶಾಲೆಗೆ ಹೋಗುತ್ತಿದ್ದ ಹೆಣ್ಣು ಮಕ್ಕಳು ಈಗ ಸೈಕಲ್ ಹತ್ತಿ ಹೋಗುತ್ತಾರೆ. ಯಾವುದೇ ಹೊತ್ತಲ್ಲಿ ಎಲ್ಲಿಗೇ ಹೋಗಲು ಅವರೀಗ ಮನೆಯ ಗಂಡಸರ ಬರವನ್ನು ಕಾಯಬೇಕಿಲ್ಲ. ಸೈಕಲ್ ಏರಿ, ಪೆಡಲ್ ತುಳಿದರಾಯಿತು. ಸೈಕಲ್ ಅವರಿಗೆ ಚಲನೆಯ ಸಂಕೇತ, ಸ್ವಾತಂತ್ರ್ಯದ ಸಂಕೇತ ಮತ್ತು ತಮ್ಮ ಬದಲಾದ ಬದುಕಿನ ಸಂಕೇತವಾಯಿತು. ಸೈಕಲ್ ಅವರ ಬದುಕಿಗೆ ಚಲನೆಯನ್ನು ಕೊಟ್ಟಿದ್ದಲ್ಲದೆ ಅವರಿಗೆ ಹೆಚ್ಚಿನ ವಿರಾಮವೂ ಸಿಗುವಂತೆ ಮಾಡಿತು. ‘ಸೈಕಲ್ ಓಟ ಕತ್ತು ಕಣುಂ ತಂಗಚ್ಚಿ (ಸೈಕಲ್ ಬಿಡುವುದು ಕಲಿತುಕೋತಂಗಿ)’ ಎನ್ನುತ್ತ ತಮ್ಮೂರಿಗೆ ಬಂದ ಹಾಡನ್ನು ಪುದುಕೋಟೆಯ ಹೆಂಗಳೆಯರು ಸೈಕಲ್ ಓಟ ಕಿತ್ತುಕೊಟ್ಟೋಮ್, ಅಣ್ಣಾಚಿ (ಸೈಕಲ್ ಬಿಡುವುದನ್ನು ಕಲಿತೆವು, ಅಣ್ಣಾ)’ ಎಂದು ಬದಲಾಯಿಸಿ ಹಾಡತೊಡಗಿದರು. ಮುಂದಿನ ಕೆಲವು ವರ್ಷಗಳಲ್ಲಿ ಸೈಕಲ್ ಕ್ರಾಂತಿ ಹಣಕಾಸಿನ ಕೊರತೆಯ ಕಾರಣಕ್ಕೆ ನಿಂತು ಹೋಯಿತಾದರೂ ಅಷ್ಟರಲ್ಲಾಗಲೇ ಅದು ಪುದುಕೋಟೆಯ ಲಕ್ಷಾಂತರ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಸಿ ತನ್ನ ಉದ್ದೇಶಿತ ಗುರಿಯನ್ನು ಸಾಧಿಸಿಯಾಗಿತ್ತು.

ಶೀಲಾ ರಾಣಿ ಚುಂಕತ್ ಬೇರೆ ಬೇರೆ ಹಳ್ಳಿಗಳ ಹೆಂಗಸರನ್ನು ಬ್ಲಾಕ್ ಲೀಡರ್ ಹಾಗೂ ಕೋ-ಆರ್ಡಿನೇಟರ್‌ಗಳನ್ನಾಗಿ ನೇಮಿಸಿ, ಅವರ ಸಹಾಯದಿಂದ ಪುದುಕೋಟ್ಟೆಯಲ್ಲಿ ಸೈಕಲ್ ಕಲಿಸುವ ಆಂದೋಲನವನ್ನು ಪ್ರಾರಂಭಿಸಿದರು. ಸುಮಾರು 30 ಸಾವಿರ ಸ್ವಯಂ ಸೇವಕಿಯರು ಆ ಸೈಕಲ್‌ ಕ್ರಾಂತಿಯಲ್ಲಿ ಭಾಗಿಯಾದರು. ಚಿಕ್ಕ ಹೆಣ್ಣುಮಕ್ಕಳಿಂದ ಹಿಡಿದು ವಯಸ್ಕ ಮಹಿಳೆಯರವರೆಗೆ ರಸ್ತೆಗಳಲ್ಲಿ ಬಿದ್ದು ಎದ್ದು ಸೈಕಲ್ ನಡೆಸಲು ಕಲಿತರು. ಕೆಳಕ್ಕೆ ಬಿದ್ದರೂ ನಗುನಗುತ್ತಾ ಮೇಲೆದ್ದು ಮತ್ತೆ ಸೈಕಲ್ ಹಿಡಿಯುತ್ತಿದ್ದರು. ಆಗ ಸಾಮಾನ್ಯವಾಗಿ ಸೈಕಲ್‌ಗಳನ್ನು ಪುರುಷರಿಗಾಗಿ ತಯಾರಿಸಲಾಗುತ್ತಿತ್ತಾದುದರಿಂದ ಅವುಗಳಿಗೆ ಒಂದು ಅಡ್ಡ ಬಾರ್ ಇರುತ್ತಿತ್ತು.

Tags:
error: Content is protected !!