Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಪುರಸಭೆಯಲ್ಲಿ ಖಾಯಂ ಅಧಿಕಾರಿಗಳಿಲ್ಲದೆ ಸಾರ್ವಜನಿಕರ ಪರದಾಟ

ಭೇರ್ಯ ಮಹೇಶ್

ಕೆ.ಆರ್.ನಗರ: ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಜನರು ಅಲೆಯಬೇಕಾದ ಸ್ಥಿತಿ; ಅಭಿವೃದ್ಧಿ ಕುಂಠಿತ ಆರೋಪ 

ಕೆ.ಆರ್.ನಗರ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುಮಾರು ನಾಲ್ಕು ತಿಂಗಳಿಂದ ಕೆಲ ಖಾಯಂ ಅಧಿಕಾರಿಗಳು ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ನಾಲ್ಕು ತಿಂಗಳುಗಳಿಂದ ಆಡಳಿತ ಅಧಿಕಾರಿ ನೇಮಕವಾಗಿಲ್ಲ. ಮುಖ್ಯಾಧಿಕಾರಿ, ವ್ಯವಸ್ಥಾಪಕರು, ಇಂಜಿನಿಯರ್, ಬಿಲ್ ಕಲೆಕ್ಟರ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಸೇರಿ ಹಲವು ಹುದ್ದೆಗಳು ಖಾಲಿ ಇದ್ದು ಸರ್ಕಾರ ಇದುವರೆಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯದೇ ವಿಳಂಬವಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಸಮುದಾಯ ಸಂಘಟಕರು, ಸಮುದಾಯ ಸಂಘಟನಾಧಿಕಾರಿ ಹುದ್ದೆ ಖಾಲಿ ಇದ್ದು ಇದುವರೆಗೂ ಯಾರು ಹುದ್ದೆಗೆ ನಿಯುಕ್ತಿಗೊಳ್ಳದ ಕಾರಣ ಪುರಸಭೆ ವ್ಯಾಪ್ತಿಯ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳಾಗಬೇಕಾದರೆ ಮತ್ತು ಜನ ಸಾಮಾನ್ಯರ ಮೂಲ ಸೌಕರ್ಯಗಳ ಬಗ್ಗೆ ಕಾರ್ಯೋನ್ಮುಖರಾಗಲು ಮೇಲೆ ಹೇಳಿದ ಮೂರು ಅಧಿಕಾರಿಗಳು ಅತ್ಯವಶ್ಯ.

ಆದರೆ ಈ ಅಧಿಕಾರಿಗಳು ಪ್ರಭಾರವಾಗಿ ಕೆಲಸ ಮಾಡುತ್ತಿರುವುದರಿಂದ ಸಕಾಲಕ್ಕೆ ಜನ ಸಾಮಾನ್ಯರ ಕೆಲಸಗಳಿಗೆ ಉತ್ತರ ಸಿಗುವುದು ತಡವಾಗಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದು, ಖಾಯಂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪುರಸಭೆ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರ ಅವಧಿ ನವೆಂಬರ್ ೬ಕ್ಕೆ ಮುಗಿದಿದ್ದು ಬಳಿಕ ಆಡಳಿತ ಅಧಿಕಾರಿಗಳ ನೇಮಕವಾಗಬೇಕಿತ್ತು. ಆದರೆ ಹುಣಸೂರು ಉಪವಿಭಾಗಾಧಿಕಾರಿಗಳು ಇಲ್ಲಿ ಇದುವರೆಗೂ ಅಧಿಕಾರ ಸ್ವೀಕರಿಸಿಲ್ಲ.

” ಕೆ.ಆರ್.ನಗರ ಪುರಸಭೆಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಖಾಯಂ ಅಧಿಕಾರಿಗಳು ನೇಮಕಗೊಳ್ಳದೇ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಿತ್ಯ ಒಂದಲ್ಲ ಒಂದು ಸಮಸ್ಯೆ ಹೊತ್ತು ಸಾರ್ವಜನಿಕರು ಪುರಸಭೆಗೆ ಬಂದರೂ ಅಧಿಕಾರಿಗಳು ಕಾಣುತ್ತಿಲ್ಲ. ವರ್ಗಾವಣೆಗೊಂಡವರ ಬದಲಿಗೆ ಬೇರೆ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಬೇಕು.”

-ಉಮಾಶಂಕರ್, ಬಿಜೆಪಿ ಮುಖಂಡರು

” ಪುರಸಭೆ ಮುಖ್ಯಾಧಿಕಾರಿಗಳು ವರ್ಗಾವಣೆಗೊಂಡು ಆರು ತಿಂಗಳುಗಳೇ ಕಳೆದಿದೆ. ಮ್ಯಾನೇಜರ್, ಇಂಜಿನಿಯರ್, ಸಮುದಾಯದ ಅಧಿಕಾರಿಗಳು ಇಲ್ಲದೆ ಅಭಿವೃದ್ಧಿ ಕಾರ್ಯ ಕ್ರಮಗಳು ಕುಠಿತವಾಗಿವೆ. ಸದಸ್ಯರಾಗಿದ್ದ ವೇಳೆ ಹಲವು ಬಾರಿ ಸಭೆಯಲ್ಲಿ ಚರ್ಚೆ ಮಾಡಲಾಯಿತಾದರೂ ಪ್ರಯೋಜನ ವಾಗಲಿಲ್ಲ. ಪಟ್ಟಣದ ನಾಗರಿಕರು ಕಚೇರಿಗೆ ಅಲೆಯುವುದು ತಪ್ಪಿಲ್ಲ.”

-ಕೆ.ಉಮೇಶ್, ಮಾಜಿ ಸದಸ್ಯರು, ಪುರಸಭೆ

Tags:
error: Content is protected !!