ಕೆ.ಎಂ.ಅನುಚೇತನ್
ಕೆ.ಆರ್.ಮೊಹಲ್ಲಾದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ೪ ತಿಂಗಳು
ಶುದ್ಧ ನೀರಿಗಾಗಿ ಬೇರೆ ಘಟಕಗಳಿಗೆ ಜನರ ಅಲೆದಾಟ
ಮನವಿಗೆ ಸ್ಪಂದಿಸದ ಅಧಿಕಾರಿಗಳು: ಸ್ಥಳೀಯರ ಆರೋಪ
ಘಟಕ ದುರಸ್ತಿಪಡಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಮೈಸೂರು: ಕುಡಿಯುವ ನೀರಿಗಾಗಿ ಜನರು ನೀರಿನ ಕ್ಯಾನ್‌ಗಳನ್ನು ಹಿಡಿದು ನೀರಿನ ಘಟಕಗಳಿಗೆ ಅಲೆಯುವ ಸ್ಥಿತಿ ಎದುರಾಗಿದೆ. ಏಕೆಂದರೆ ಶುದ್ಧ ಕುಡಿಯುವ ನೀರಿನ ಪೂರೈಕೆಗಳು ಕೆಟ್ಟು ನಿತ್ರಾಣಗೊಂಡಿವೆ! ಸ್ಥಳೀಯರು ಕೆಲ ತಿಂಗಳುಗಳಿಂದ ಶುದ್ಧ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ನಗರದ ಕೆ.ಆರ್.ಮೊಹಲ್ಲಾದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಎದುರಿನ ಶುದ್ಧ ಕುಡಿಯುವ ನೀರಿನ ಘಟಕ ಕೆಲವು ತಿಂಗಳುಗಳಿಂದ ಕೆಟ್ಟು ನಿಂತಿದೆ. ಇದರಿಂದ ಸ್ಥಳೀಯರು ಶುದ್ಧ ಕುಡಿಯುವ ನೀರಿಗಾಗಿ ಬೇರೆಡೆ ಇರುವ ನೀರಿನ ಘಟಕಗಳಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆ.ಆರ್.ಮೊಹಲ್ಲಾದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ನಾಲ್ಕು ತಿಂಗಳುಗಳಿಂದ ಕಾರ್ಯ ನಿರ್ವಹಿಸುತಿಲ್ಲ. ಈ ಸಮಸ್ಯೆ ಬಗ್ಗೆ ದೂರು ನೀಡಲು ಸಂಬಂಧಪಟ್ಟ ಸಹಾಯವಾಣಿಗೆ ಕರೆ ಮಾಡಿದರೆ, ಸರಿಯಾಗಿ ಉತ್ತರಿಸುವುದಿಲ್ಲ. ಘಟಕ ನಿರ್ವಹಣಾಗಾರರನ್ನು ಪ್ರಶ್ನಿಸಿದರೆ, ಮೋಟಾರ್ ಕೆಟ್ಟು ಹೋಗಿದೆ, ದುರಸ್ತಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಕಾರಣ ನೀಡುತ್ತಾರೆ. ಅತ್ತ ನಗರಪಾಲಿಕೆ ಅಧಿಕಾರಿಗಳು ನೆಪ ಹೇಳಿ, ಉಡಾಫೆ ತೋರಿಸುತ್ತಿದ್ದಾರೆ. ನಾಲ್ಕು ತಿಂಗಳುಗಳಿಂದ ಬೇರೆಡೆಗೆ ನೀರು ತರಲು ಹೋಗುವಂತಾಗಿದೆ. ಅಲ್ಲೂ ಕೆಲವೊಮ್ಮೆ ಮೋಟಾರ್ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಶುದ್ಧ ಕುಡಿಯುವ ನೀರು ತರಲು ಸಮಸ್ಯೆ ಉಂಟಾಗುತ್ತಿದೆ ಎಂಬುದಾಗಿ ಸ್ಥಳೀಯರು ಅಲವತ್ತುಕೊಳ್ಳುತ್ತಾರೆ.
ದೂರು ನೀಡಿದರೂ ಪ್ರಯೋಜನವಿಲ್ಲ: ಅಧಿಕಾರಿಗಳಿಗೆ ಸಮಸ್ಯೆ ಕುರಿತು ನಿರಂತರವಾಗಿ ದೂರು ನೀಡುತ್ತಿದ್ದೇವೆ. ಪಾಲಿಕೆ ಕಚೇರಿಗೆ ತೆರಳಿ ಹಲವು ಬಾರಿ ದೂರು ನೀಡಿದ್ದು, ಸರಿಪಡಿಸುವುದಾಗಿ ಸಬೂಬು ಹೇಳಿ ಕಳುಹಿಸುತ್ತಾರೆ. ಕೆಲವು ಅಧಿಕಾರಿಗಳು ಕರೆ ಮಾಡಿದರೆ, ಸರಿಯಾಗಿ ಉತ್ತರಿಸುವುದಿಲ್ಲ. ಪದೇ ಪದೇ ಕರೆ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುತ್ತಾರೆ. ನೀರಿನ ಘಟಕದ ಮೋಟಾರ್ ಸರಿಪಡಿಸಲು ಇಲ್ಲಸಲ್ಲದ ನೆಪಗಳನ್ನು ಹೇಳಿ ಸಮಸ್ಯೆಯನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲಾಗದ ನಗರಪಾಲಿಕೆ ಅಧಿಕಾರಿಗಳು ಯಾವ ಅಭಿವೃದ್ಧಿ ಕಾರ್ಯ ಮಾಡುತ್ತಾರೆ? ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
” ಶುದ್ಧ ಕುಡಿಯುವ ನೀರನ ಘಟಕ ಕೆಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ನೀರಿನ ಘಟಕ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ.”
– ಶೇಖ್ ತನ್ವೀರ್ ಆಸಿಫ್, ಆಯುಕ್ತರು, ಮಹಾನಗರ ಪಾಲಿಕೆ
” ಕಳೆದ ನಾಲ್ಕು ತಿಂಗಳುಗಳಿಂದ ಮೋಟಾರ್ ಕೆಟ್ಟು ನಿಂತು ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಕುಡಿಯುವ ನೀರಿನ ಪೂರೈಕೆ ಮಾಡಲಾಗದ ಇವರು, ಮೈಸೂರಿನ ಅಭಿವೃದ್ಧಿ ಹೇಗೆ ಮಾಡುತ್ತಾರೆ?”
-ಪಿ.ಮಹದೇಶ್, ಸ್ಥಳೀಯ ನಿವಾಸಿ





