Mysore
29
few clouds

Social Media

ಮಂಗಳವಾರ, 03 ಮಾರ್ಚ್ 2026
Light
Dark

‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳಲ್ಲಿ ರಂಗಶಿಕ್ಷಣ ನೀಡಿ’

ಗಿರೀಶ್ ಹುಣಸೂರು

ಕೆಪಿಎಸ್, ಪಿಎಂಶ್ರೀ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು

ಮೈಸೂರು: ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಏಕಾಂಗಿ ಭಾವನೆ, ಮೊಬೈಲ್ ಅಡಿಕ್ಷನ್ ಮತ್ತು ವರ್ತನಾ ಸಮಸ್ಯೆಗಳು ಗಂಭೀರ ವಿಷಯಗಳಾಗಿದ್ದು, ಇದಕ್ಕೆ ಶಾಲಾ ಹಂತದಲ್ಲಿಯೇ ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳ ವ್ಯವಸ್ಥಿತ ಒಳಗೊಳ್ಳುವಿಕೆ ಅಗತ್ಯವಾಗಿದೆ. ಹೀಗಾಗಿ ಮಕ್ಕಳ ಸಮಗ್ರ ವಿಕಾಸ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳ ಪಾತ್ರವೂ ಮಹತ್ವದ್ದಾಗಿದೆ. ಅದರಲ್ಲೂ ರಂಗಶಿಕ್ಷಣ (ಥಿಯೇಟರ್ ಎಜುಕೇಷನ್) ಮಕ್ಕಳ ಮಾನಸಿಕ, ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ವಿಕಾಸಕ್ಕೆ ಪ್ರಮುಖ ಸಾಧನವಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ, ಸೃಜನಶೀಲತೆ ಹಾಗೂ ಶಿಸ್ತು ಬೆಳೆಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಆರ್ಟಿಕಲ್ ೨೯ರ ಪ್ರಕಾರ ಶಿಕ್ಷಣವು ಮಕ್ಕಳ ವ್ಯಕ್ತಿತ್ವ, ಪ್ರತಿಭೆ ಮತ್ತು ಮಾನಸಿಕ-ದೈಹಿಕ ಸಾಮರ್ಥ್ಯಗಳ ಸಂಪೂರ್ಣ ವಿಕಾಸಕ್ಕೆ ನೆರವಾಗಬೇಕು ಹಾಗೂ ಆರ್ಟಿಕಲ್ ೩೧ರ ಪ್ರಕಾರ ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕನ್ನು ಸ್ಪಷ್ಟಪಡಿಸಲಾಗಿದೆ. ಇದಲ್ಲದೆ,ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-೨೦೦೯ರ ಸೆಕ್ಷನ್ ೨೯(೨)(ಜಿ) ಶಿಕ್ಷಣವು ಮಕ್ಕಳ ಸರ್ವತೋಮುಖ ವಿಕಾಸವನ್ನು ಉತ್ತೇಜಿಸಬೇಕು ಎಂದು ನಿರ್ದಿಷ್ಟಪಡಿಸುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕೂಡ ಕಲಾ ಶಿಕ್ಷಣ, ನಾಟಕ, ಸಂಗೀತ ಮತ್ತು ಸೃಜನಶೀಲ ಚಟುವಟಿಕೆಗಳನ್ನು ಮುಖ್ಯವಾಹಿನಿ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಅಳವಡಿಸಬೇಕೆಂದು ಶಿಫಾರಸು ಮಾಡುತ್ತದೆ. ಯುನೆಸ್ಕೋ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಗಳ ಅಧ್ಯಯನಗಳ ಪ್ರಕಾರ ರಂಗಶಿಕ್ಷಣವು ಮಕ್ಕಳಲ್ಲಿ ಮಾನಸಿಕ ಧೈರ್ಯ, ಭಾವನಾತ್ಮಕ ಬುದ್ಧಿಮತ್ತೆ, ಒತ್ತಡ ನಿರ್ವಹಣೆ ಮತ್ತು ಸಾಮಾಜಿಕ ಹೊಂದಾಣಿಕೆ ಹೆಚ್ಚಿಸುವುದಾಗಿ ದೃಢಪಟ್ಟಿದೆ. ಯುನೈಟೆಡ್ ಕಿಂಗ್‌ಡಂ, ಕೆನಡಾ ಮತ್ತು ಫಿನ್‌ಲ್ಯಾಂಡ್ ನ ಶಾಲೆಗಳಲ್ಲಿ ರಂಗಶಿಕ್ಷಣ ಆಧಾರಿತ ಕಲಿಕೆಯನ್ನು ಅಳವಡಿಸಿದ ಪರಿಣಾಮ ಶಾಲೆಗಳಲ್ಲಿ ದೈಹಿಕ, ಮಾನಸಿಕ ಅಥವಾ ಸಾಮಾಜಿಕವಾಗಿ ನೋಯಿಸುವುದು (ಬುಲಿಯಿಂಗ್), ಡ್ರಾಪ್‌ಔಟ್ ಹಾಗೂ ವರ್ತನಾ ಸಮಸ್ಯೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಭಾರತದಲ್ಲಿ ದಿಲ್ಲಿ ಸರ್ಕಾರದ ಹ್ಯಾಪಿನೆಸ್ ಕರಿಕುಲಂ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಕಲಾ ಶಿಕ್ಷಣ ಕಾರ್ಯಕ್ರಮಗಳು ಈ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವನ್ನು ನೀಡಿವೆ.

ಕರ್ನಾಟಕ ಸರ್ಕಾರದ ಕೆಪಿಎಸ್ ಹಾಗೂ ಪಿಎಂ ಶ್ರೀ ಶಾಲೆಗಳು ಮಾದರಿ ಶಿಕ್ಷಣ ಸಂಸ್ಥೆಗಳಾಗಿದ್ದು, ಇಲ್ಲಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ವಿಶೇಷ ಒತ್ತು ನೀಡಲಾಗಿದೆ. ಈ ಶಾಲೆಗಳಲ್ಲಿ ಪೂರ್ಣಕಾಲಿಕ ರಂಗಶಿಕ್ಷಕರನ್ನು ನೇಮಕ ಮಾಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಸುಧಾರಣೆ, ಮೊಬೈಲ್ ಅವಲಂಬನೆ ಕಡಿತ ಹಾಗೂ ಕಲಿಕಾ ಆಸಕ್ತಿ ಹೆಚ್ಚಳವಾಗಲಿದೆ.

ಆದ್ದರಿಂದ, ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಹಾಗೂ ಕಾನೂನು ಮತ್ತು ರಾಷ್ಟ್ರೀಯ ನೀತಿಗಳ ಆಶಯಕ್ಕೆ ಅನುಗುಣವಾಗಿ, ಕೆಪಿಎಸ್ ಮತ್ತು ಪಿಎಂ ಶ್ರೀ ಶಾಲೆಗಳಲ್ಲಿ ರಂಗಶಿಕ್ಷಕರ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿಯನ್ನು ತ್ವರಿತವಾಗಿ ಜಾರಿಗೊಳಿಸಬೇಕು, ಅಗತ್ಯವಾದ ನಿಯಮಾವಳಿ ಹಾಗೂ ತರಬೇತಿ ವ್ಯವಸ್ಥೆ ರೂಪಿಸಬೇಕು ಎಂದು ಕೋರಲಾಗಿದೆ.

” ಮಕ್ಕಳನ್ನು ಸಮರ್ಥ, ಸೃಜನಶೀಲ ಮತ್ತು ಸಂವೇದನಾಶೀಲ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣದ ಮೂಲ ಗುರಿಯಾಗಿದ್ದು, ರಂಗಶಿಕ್ಷಣವು ಈ ಗುರಿ ಸಾಧನೆಯಲ್ಲಿ ಪ್ರಮುಖ ಸಾಧನವಾಗಿರುವುದರಿಂದ ಈ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸುವಂತೆ ಕೋರಲಾಗಿದೆ.”

ಡಾ. ಕೆ.ಟಿ.ತಿಪ್ಪೇಸ್ವಾಮಿ, ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 

 

 

Tags:
error: Content is protected !!