ಸರಗೂರು ತಾಲ್ಲೂಕಿನ ಕಟ್ಟೆಹುಣಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜೂರು, ನಂಜೀಪುರ, ಕಲ್ಲಂಬಾಳು, ದಡದಹಳ್ಳಿ, ಕುಂದೂರು ಸೇರಿದಂತೆ ಆಸುಪಾಸಿನ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಸಿಗದೆ ಅವರು ಪರದಾಡುವಂತಾಗಿದೆ.
ಬಸ್‌ಗಳನ್ನು ಹುಲ್ಲಹಳ್ಳಿ-ಸರಗೂರು ನಡುವೆ ಸಂಚರಿಸುವ ಆಶ್ರಯಿಸಿ ಈ ಗಾಮಗಳ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗುತ್ತಿದ್ದರು. ಆದರೆ ಕಳೆದ 3 ತಿಂಗಳುಗಳಿಂದ ಹುಲ್ಲಹಳ್ಳಿ-ರಾಜೂರು-ಕಟ್ಟೆಹುಣಸೂರು ಮಾರ್ಗವಾಗಿ ಸಂಜೆ 4.30ಕ್ಕೆ ಸಂಚರಿಸುತ್ತಿದ್ದ ಬಸ್ ನಿಂತುಹೋಗಿದ್ದು, ವಿದ್ಯಾರ್ಥಿಗಳು ಸಂಜೆಯ ವೇಳೆ ಮನೆಗೆ ಹೋಗಲು ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ. ಸರಿಯಾದ ಸಮಯಕ್ಕೆ ಬಸ್ ಸಿಗದ ಪರಿಣಾಮ ಸಾಕಷ್ಟು ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಬಂದು ಹೋಗುತ್ತಿದ್ದಾರೆ. ಅಲ್ಲದೆ ಕೆಲ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟಿದ್ದು, ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಪೋಷಕರೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಮಕ್ಕಳ ದಾಖಲಾತಿಯೂ ಕಡಿಮೆಯಾಗುತ್ತಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸಬೇಕಿದೆ.
-ಎಂ.ವಿಷಕಂಠ, ಅಹಿಂದ ಸಮನ್ವಯ ಸಮಿತಿ ಜಂಟಿ ಕಾರ್ಯದರ್ಶಿ, ಕುವೆಂಪುನಗರ, ಮೈಸೂರು.





