Mysore
19
overcast clouds
Light
Dark

ಓದುಗರ ಪತ್ರ: ಅಭಿವೃದ್ಧಿಗೆ ಆದ್ಯತೆ ನೀಡಿ

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ತೀರ್ಮಾನಿಸಿರುವುದಾಗಿ ವರದಿಯಾಗಿದ್ದು, ಇದೊಂದು ಒಳ್ಳೆಯ ಬೆಳವಣಿಗೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಜನರ ಬಹುದಿನಗಳ ಕನಸಾಗಿತ್ತು. ಇದೀಗ ಸಚಿವಾಲಯ ರಚನೆ ಮಾಡಲು ತೀರ್ಮಾನಿಸಿದ್ದು, ಅದಕ್ಕೆ ತಕ್ಕಂತೆ ಅನುದಾನವನ್ನೂ ನೀಡುವುದು ಅಗತ್ಯ.

ಸಂವಿಧಾನದಲ್ಲಿ 371 ಜೆ ಸೇರ್ಪಡೆ ಮಾಡಿದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಿದ್ದೇ ಆದಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿಯ ಹಾದಿ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆಯಿಂದ ಮುನ್ನಡೆಯುವುದು ಅಗತ್ಯ.

ಇನ್ನು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದರ ಜತೆಗೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಹಾಗೆಯೇ ಕಲಬುರಗಿಯಲ್ಲೂ ಅಧಿವೇಶನ ನಡೆಸುವುದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಅಲ್ಲದೆ ರಾಜ್ಯವನ್ನು ಉತ್ತರ ಮತ್ತು ದಕ್ಷಿಣ ಎಂದು ಇಬ್ಬಾಗ ಮಾಡುವ ಬದಲು ಎಲ್ಲ ಪ್ರದೇಶಗಳ ಸಾಂಸ್ಕೃತಿಕ ಏಕೀಕರಣದೊಂದಿಗೆ ರಾಜ್ಯದ ಆರ್ಥಿಕ ಪ್ರಗತಿಯ ಜತೆ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸಬೇಕು.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.