ತಗಡೂರು ವಸತಿ ಶಾಲೆಯ ಮಕ್ಕಳ ಪ್ರತಿಭಟನೆಗೆ ಸಂದ ಜಯ
ನಂಜನಗೂಡು: ತಾಲ್ಲೂಕಿನ ತಗಡೂರಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳ ನ್ಯಾಯಯುತವಾದ ಪ್ರತಿಭಟನೆಗೆ ಮಣಿದ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವಸತಿ ನಿಲಯದ ಪ್ರಾಂಶು ಪಾಲರಾದ ವಸಂತ ಕುಮಾರಿ, ವಸತಿ ನಿಲಯದ ಪಾಲಕ ಮಹದೇವಪ್ಪ ಹಾಗೂ ಗಣಿತ ಉಪನ್ಯಾಸಕ ಮಂಜುನಾಥ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದು, ಅತಿಥಿ ಉಪನ್ಯಾಸಕ ಗುರುಸ್ವಾಮಿಯವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನರ ಸ್ವಕ್ಷೇತ್ರ ವರುಣ ವ್ಯಾಪ್ತಿಯಲ್ಲಿನ ವಸತಿ ಶಾಲೆಯ ಮಕ್ಕಳೇ ಪ್ರಾಧ್ಯಾಪಕರು ಪ್ರಾಂಶುಪಾಲರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಮೂವರನ್ನು ಅಮಾನತ್ತುಗೊಳಿಸಿದೆ.
ಉಪವಿಭಾಗಾಧಿಕಾರಿ ಆಶಪ್ಪ ಹಾಗೂ ತಹಸಿಲ್ದಾರ್ ಶಿವಕುಮಾರ ಕ್ಯಾಸನೂರು ಕಳಿಸಿದ ತುರ್ತು ವರದಿಯ ಮೇರೆಗೆ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜು, ತಗಡೂರಿನ ವಸತಿ ಶಾಲೆಯ ಪ್ರಾಂಶುಪಾಲರಾದ ವಸಂತ ಕುಮಾರಿ, ನಿಲಯ ಪಾಲಕ ಮಹದೇವಪ್ಪ, ಗಣಿತ ಶಿಕ್ಷಕ ಮಂಜುನಾಥ ಅವರನ್ನು ಅಮಾನತ್ತು ಗೊಳಿಸಿದ್ದಾರೆ.
ತಾತ್ಕಾಲಿಕವಾಗಿ ಶಾಲೆಯ ಹಿರಿಯ ಉಪನ್ಯಾಸಕರಿಗೆ ಅಧಿಕಾರ ವಹಿಸಿಕೊಳ್ಳುವಂತೆ ಸೋಮವಾರವೇ ಆದೇಶ ಹೊರಡಿಸಿದೆ. ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಒಳಗಾಗಿರುವ ಅತಿಥಿ ಉಪನ್ಯಾಸಕ ಗುರುಸ್ವಾಮಿಯವರನ್ನು ಶಾಲೆಯ ಕರ್ತವ್ಯ ಬಿಡುಗಡೆಗೊಳಿಸುವಂತೆ ಮೌಖಿಕ ಸೂಚನೆಯೂ ಹಿರಿಯ ಅಧಿಕಾರಿಗಳಿಂದ ಬಂದಿದೆ ಎನ್ನಲಾಗಿದೆ.





