Mysore
20
mist

Social Media

ಭಾನುವಾರ, 11 ಜನವರಿ 2026
Light
Dark

ಮಾವುತರು, ಕಾವಾಡಿಗಳ ಆತಿಥ್ಯಕ್ಕೆ ತಯಾರಿ

ಅರಮನೆ ಆವರಣದಲ್ಲಿ ಭರದ ಸಿದ್ಧತೆ; ೪೦ಕ್ಕೂ ಹೆಚ್ಚು ಶೆಡ್‌ಗಳ ನಿರ್ಮಾಣ

ಮೈಸೂರು: ದಸರಾ ಮಹೋತ್ಸವದಲ್ಲಿ ಜಂಬೂಸವಾರಿಯ ಗಜಪಡೆಯೊಂದಿಗೆ ಭಾಗಿಯಾಗಲಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಭರ್ಜರಿ ಆತಿಥ್ಯ ನೀಡಲು ಅರಣ್ಯ ಇಲಾಖೆ ಮತ್ತು ಮೈಸೂರು ಅರಮನೆ ಮಂಡಳಿ ತಯಾರಿ ನಡೆಸಿದೆ.

ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದ ಸದಸ್ಯರು ದಸರಾ ಉತ್ಸವದ ಭಾಗವೇ ಆಗಿರುವುದರಿಂದ ಎರಡು ತಿಂಗಳ ಮುನ್ನವೇ ಅರಮನೆ ಆವರಣದಲ್ಲಿ ಸಿದ್ಧತೆ ನಡೆದಿದೆ. ಆನೆಗಳು, ಮಾವುತರು ಹಾಗೂ ಕಾವಾಡಿಗಳು ಉಳಿದುಕೊಳ್ಳಲು ೪೦ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅರಮನೆ ಅಂಗಳದಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್‌ಫಾರ್ಮ್ ಮೇಲೆ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ.

ಇದರೊಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಇನ್ನಿತರೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿದೆ.

ಸಿಸಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ: ಗಜಪಡೆ ಅರಮನೆ ಆವರಣವನ್ನು ಪ್ರವೇಶಿಸಿದ ಬಳಿಕ ದಸರಾ ಆನೆಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿದಂತೆ ಆಯ್ದಜಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಇದ್ದರೂ ಪ್ರವಾಸಿಗರು ಫೋಟೋ, ಸೆಲಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಲು ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಅನುಕೂಲವಾಗಲಿದೆ.

ನಾಲ್ಕು ಹೆಣ್ಣಾನೆಗಳು ಸೇರಿ ೧೪ ಆನೆಗಳ ಆಗಮನ: 

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ನಾಲ್ಕು ಹೆಣ್ಣಾನೆಗಳೂ ಸೇರಿದಂತೆ ಒಟ್ಟು ೧೪ ಆನೆಗಳು ಭಾಗಿಯಾಗುತ್ತಿವೆ. ೧೪ ಆನೆಗಳ ಪೈಕಿ ೯ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮತ್ತಿಗೋಡು ಶಿಬಿರದ ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ ಹಾಗೂ ಬಳ್ಳೆಯ ಲಕ್ಷ್ಮೀ ಅನೆಗಳು ಆಗಮಿಸಲಿವೆ. ಈ ವರ್ಷ ಮೊದಲ ತಂಡದಲ್ಲಿ ೯, ಎರಡನೇ ತಂಡದಲ್ಲಿ ೫ ಆನೆಗಳು ಸೇರಿದಂತೆ ಒಟ್ಟು ೧೪ ಆನೆಗಳನ್ನು ಕರೆ ತರಲಾಗುತ್ತಿದೆ. ತಲಾ ೧೪ ಮಾವುತರು ಮತ್ತು ಕಾವಾಡಿಗಳು, ವಿಶೇಷ ಮಾವುತರು ಹಾಗೂ ಅಡುಗೆ ಸಹಾಯಕರು, ಕುಟುಂಬದ ಸದಸ್ಯರು ಆಗಮಿಸಲಿದ್ದಾರೆ. ೪೦ಕ್ಕೂ ಹೆಚ್ಚು ಕುಟುಂಬಗಳಿಂದ ೧೨೦ಕ್ಕೂ ಹೆಚ್ಚು ಜನರು ಆನೆಗಳ ಜತೆ ಆಗಮಿಸಲಿದ್ದಾರೆ ಎನ್ನಲಾಗಿದೆ.

” ದಸರಾದಲ್ಲಿ ಭಾಗಿಯಾಗುವ ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ತಾತ್ಕಾಲಿಕ ವಾಸಕ್ಕೆ ಅಗತ್ಯವಿರುವ ಶೆಡ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಬೇಕಾದ ಎಲ್ಲ ಪದಾರ್ಥಗಳನ್ನು ಈಗಾಗಲೇ ಅರಮನೆ ಅಂಗಳಕ್ಕೆ ತರಿಸಲಾಗಿದ್ದು, ನಿರ್ಮಾಣ ಕಾರ್ಯ ಆರಂಭವಾಗಿದೆ.”

-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್

ಆನೆಕೊಳದ ಸಮೀಪ ಟೆಂಟ್ ಶಾಲೆಗೆ ವ್ಯವಸ್ಥೆ:  ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ ೫೦ಕ್ಕೂ ಹೆಚ್ಚು ಮಕ್ಕಳಿಗಾಗಿ ಅರಮನೆ ಅಂಗಳದಲ್ಲಿ ಟೆಂಟ್ ಶಾಲೆ ನಿರ್ಮಿಸಲಾಗುತ್ತಿದೆ. ಜತೆಗೆ, ಗ್ರಂಥಾಲಯ, ಆಯುರ್ವೇದ ಚಿಕಿತ್ಸಾಲಯವನ್ನೂ ತೆರೆಯಲಾಗುತ್ತಿದೆ. ಈ ಬಾರಿಯೂ ಆನೆ ಕೊಳದ ಸಮೀಪದ ಕಟ್ಟಡದಲ್ಲಿಯೇ ಟೆಂಟ್ ಶಾಲೆಗೆ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ.

Tags:
error: Content is protected !!