ಕಾಂಗೀರ ಬೋಪಣ್ಣ
ಮಣ್ಣು ಅಗೆದಿರುವುದರಿಂದ ಸಮೀಪದ ಮನೆಗಳು ಕುಸಿಯುವ ಭೀತಿ; ಸೂಕ್ತ ಕ್ರಮಕ್ಕೆ ನಿವಾಸಿಗಳ ಒತ್ತಾಯ
ವಿರಾಜಪೇಟೆ: ಪುರಸಭೆಯ ಪರವಾನಗಿ ಪಡೆಯದೆ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆದ ಪರಿಣಾಮ ಸಮೀಪದ ಮನೆಗಳು ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಟ್ಟಣದ ಎಫ್‌ಎಂಸಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ವ್ಯಕ್ತಿಯೊಬ್ಬರು ೧೦ ಸೆಂಟ್ ಜಾಗ ಖರೀದಿಸಿ ಆ ಜಾಗದಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಲು ಮೂರು ತಿಂಗಳಿನಿಂದ ಕಾಮಗಾರಿ ನಡೆಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಜೆಸಿಬಿಯಂತ್ರ ಬಳಸಿ ೧೦ರಿಂದ ೧೨ ಅಡಿ ಅಳದ ಗುಂಡಿ ತೆಗೆದ ಕಾರಣ ಸಮೀಪದ ಮನೆಗೆ ಹಾನಿಯಾಗಿದೆ. ಜೊತೆಗೆ ಪಿಲ್ಲರ್ಗಾಗಿ ಮತ್ತೆ ಏಳೆಂಟು ಅಡಿ ಅಳ ಅಗೆದ ಕಾರಣ ಒಟ್ಟು ೨೦ ಅಡಿ ಗುಂಡಿ ಮಾಡಲಾಗಿದೆ. ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮಣ್ಣು ತೆಗೆದಿರುವುದರಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಮೀಪದ ಪುಖರಾಜ್ ಚೌಧರಿ ಎಂಬವರ ಮನೆಗೆ ಹಾನಿಯಾಗಿದ್ದು ಅಪಾಯ ಸ್ಥಿತಿಯಲ್ಲಿದೆ.
ಕಾಮಗಾರಿ ನಡೆಯುತ್ತಿರುವ ಸ್ಥಳ ಮುಖ್ಯ ರಸ್ತೆ ಒತ್ತಿನಲ್ಲಿರುವುದರಿಂದ ಚರಂಡಿಯ ನೀರು ಕಾಮಗಾರಿ ಸ್ಥಳಕ್ಕೆ ನುಗ್ಗಿ ಸುತ್ತಲಿನ ಪ್ರದೇಶದಲ್ಲಿ ಭಾರಿ ನೀರು ನಿಂತು ತೇವಾಂಶದಿಂದ ಕೂಡಿದೆ. ಗುಂಡಿಯಲ್ಲಿ ೬ ಅಡಿವರೆಗೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಒತ್ತಿನ ಹಳೆ ಕಟ್ಟಡಗಳು ಕುಸಿದು ಬಿದ್ದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರಾದ ಪುಖರಾಜ್ ಚೌಧರಿ, ಎಫ್‌ಎಂಸಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ೨೦೦೬ರಲ್ಲಿ ನಾನು ಬ್ಲಾಕ್ ಸಂಖ್ಯೆ ೫, ಸರ್ವೆ ನಂಬರ್ ೮೯/೧ ರಲ್ಲಿ ನಾಲ್ಕೂವರೆ ಸೆಂಟ್ ಜಾಗದಲ್ಲಿ ವಾಸದ ಮನೆ ನಿರ್ಮಿಸಿದ್ದೇನೆ. ಅಲ್ಲದೆ ನನ್ನ ಮನೆಗೆ ಹೋಗಿ ಬರಲು ನಾಲ್ಕು ಅಡಿ ಜಾಗವನ್ನು ಬಿಟ್ಟಿದ್ದೇನೆ. ಆದರೆ, ಸಮೀಪದಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆದಿರುವುದರಿಂದ ಮನೆ ಕುಸಿಯುವ ಭೀತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಪರವಾನಗಿ ಪಡೆಯಬೇಕು. ಪುರಸಭೆಯಿಂದಾದರೂ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಯಾವ ಪರವಾನಗಿಯನ್ನೂ ಪಡೆಯದೆ ಕಟ್ಟಡ ನಿರ್ಮಿಸು ತ್ತಿದ್ದರೂ ಪುರಸಭೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅನಾಹುತ ಸಂಭವಿಸಿದಲ್ಲಿ ಪುರಸಭೆಯೇ ಹೊಣೆ ಯಾಗಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
” ಈ ಕಟ್ಟಡ ಕಾಮಗಾರಿಗೆ ಪುರಸಭೆಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಅಕ್ಕ ಪಕ್ಕದ ಮನೆಗಳಿಗೆಹಾನಿ ಉಂಟಾಗದ ರೀತಿ ತಮ್ಮ ಸ್ವಂತ ಖರ್ಚಿನಿಂದ ಅಗತ್ಯ ತಡೆ ಗೋಡೆ ನಿರ್ಮಿಸಲು ಮಾತ್ರ ಪುರಸಭೆ ಅನುಮತಿ ನೀಡಿದೆ. ಈ ಸಂಬಂಧ ಪುರಸಭೆಯಿಂದ ನೋಟಿಸ್ ಜಾರಿ ಮಾಡಿ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ.”
ನಾಚಪ್ಪ, ಪುರಸಭೆಯ ಮುಖ್ಯಾಧಿಕಾರಿ
” ನನ್ನ ಮನೆ ಅಪಾಯ ಸ್ಥಿತಿಯಲ್ಲಿರುವುದರಿಂದ ಸದ್ಯಕ್ಕೆ ವಸತಿಗೃಹವೊಂದರಲ್ಲಿ ಕುಟುಂಬದೊಂದಿಗೆ ವಾಸ್ತವ್ಯ ಹೂಡಿದ್ದೇನೆ. ಈ ಕಟ್ಟಡ ನಿರ್ಮಾಣದ ಬಗ್ಗೆ ಸುತ್ತಮುತ್ತಲಿನ ಪ್ರದೇಶದವರು ಪುರಸಭೆಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರಭಾವಿ ವ್ಯಕ್ತಿಯೊಬ್ಬರು ಅವೈಜ್ಞಾನಿಕ ಕಟ್ಟಡ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಜಿಲ್ಲಾಽಕಾರಿಗಳು, ಶಾಸಕರು ಇದನ್ನು ಗಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು.”
ಪುಖರಾಜ್ ಚೌಧರಿ, ಸ್ಥಳೀಯ ನಿವಾಸಿ





