ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ;
ಕಾಲುವೆ, ತೋಡು, ಚರಂಡಿಗಳ ಸ್ವಚ್ಛತೆ; ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ
ಕೆ.ಬಿ.ಶಂಷುದ್ದೀನ್
ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಅವಧಿಗೂ ಮುನ್ನವೇ ಮಳೆಯಾಗಿ ಆತಂಕ ಸೃಷ್ಟಿಸಿದೆ. ಪ್ರತಿ ಬಾರಿ ಪ್ರವಾಹ ಪರಿಸ್ಥಿತಿ ಎದುರಿಸುವ ಕುಶಾಲನಗರದಲ್ಲಿಯೂ ಆತಂಕದ ವಾತಾವರಣ ಮನೆ ಮಾಡಿದ್ದು, ಮುಂಗಾರು ಮಳೆ ಎದುರಿಸಲು ಕುಶಾಲನಗರ ಪುರಸಭೆ ಹಾಗೂ ನೆರೆಯ ಗ್ರಾಮ ಪಂಚಾಯಿತಿಗಳು ಸಜ್ಜಾಗಿವೆ. ಮುಂಗಾರಿನಲ್ಲಿ ಉಂಟಾಗಬಹುದಾದ ಸಂಭಾವ್ಯ ಅನಾಹುತಗಳನ್ನು ಎದುರಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಈಗಾಗಲೇ ಕಾರ್ಯೋನ್ಮುಖವಾಗಿದೆ.
ಕಾವೇರಿ ನದಿ ತಟದಲ್ಲಿರುವ ಸ್ಥಳೀಯ ಆಡಳಿತಗಳು ಈಗಾಗಲೇ ಪ್ರವಾಹ ಪರಿಸ್ಥಿತಿ ಎದುರಿಸಲು ನದಿ ತಟದ ನಿವಾಸಿಗಳನ್ನು ಎಚ್ಚರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಹಲವು ಬಾರಿ ಉಂಟಾದ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳನ್ನು ಎಚ್ಚರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಸುಮಾರು ೨೯೨ ಮನೆಗಳಿಗೆ ನೋಟಿಸ್ ನೀಡುವ ಕಾರ್ಯ ಆರಂಭಗೊಂಡಿದೆ.
ಎತ್ತರದ ಪ್ರದೇಶಗಳಿಂದ ಹರಿದು ನದಿ ಸೇರುವ ಮಾರ್ಗ ಹಾಗೂ ಬಡಾವಣೆಗಳಲ್ಲಿರುವ ಕಾಲುವೆ, ತೋಡು, ಚರಂಡಿಗಳ ಸ್ವಚ್ಛತೆ ಕಾರ್ಯವನ್ನು ಪುರಸಭೆ ವತಿಯಿಂದ ನಡೆಸಲಾಗಿದೆ. ಜೆಸಿಬಿ ಬಳಸಿ ಹೂಳು, ತ್ಯಾಜ್ಯ ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯಲ್ಲಿ ೨೪೭ ಮಾದರಿಯ ಸಹಾಯವಾಣಿ ತೆರೆಯಲಾಗಿದೆ (ಸಹಾಯವಾಣಿ : ೦೮೨೭೬೨೭೬೭೧೬).
ಸಂಭವನೀಯ ಅಪಾಯಗಳನ್ನು ತಪ್ಪಿಸಲು ಕಾರ್ಯಯೋಜನೆ ರೂಪಿಸಿ, ತುರ್ತು ಪುನರ್ವಸತಿಗಾಗಿ ಕಾಳಜಿ ಕೇಂದ್ರಗಳನ್ನು ಗುರುತಿಸುವ ಕಾರ್ಯ ನಡೆಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕ್ಷೇತ್ರದ ಶಾಸಕ ಡಾ. ಮಂಥರ್‌ಗೌಡ ಕೂಡ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಿದ್ದಾರೆ.
ಅತಿವೃಷ್ಟಿಯಿಂದಾಗಿ ಕಳೆದ ಬಾರಿ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು ಹಾನಿಗೆ ಒಳಗಾಗಿದ್ದವು. ಅಲ್ಲದೆ ಬಹಳಷ್ಟು ಕಡೆಗಳಲ್ಲಿ ಮರಗಳು ರಸ್ತೆಗೆ ಉರುಳಿ ಜನಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿತ್ತು. ಈ ಎಲ್ಲ ಅಡಚಣೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯು ಯಶಸ್ವಿಯಾಗಿ ನಿಭಾಯಿಸಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮ ಪಂಚಾಯಿತಿಯ ಟಾಸ್ಕ್ ಫೋರ್ಸ್ ಸಮಿತಿ ರಚನೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹಾಗೂ ಸ್ಥಳೀಯ ಸ್ವಯಂಸೇವಕರ ಪಟ್ಟಿ ತಯಾರಿಸಲಾಗಿದೆ.
” ಪ್ರವಾಹದ ತುರ್ತು ಸಂದರ್ಭದಲ್ಲಿ ನೆರವಿಗಾಗಿ ಕಚೇರಿಯಿಂದ ಕಾರ್ಯಪಡೆಯನ್ನು ನೇಮಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ತಿಳಿವಳಿಕೆ ನೋಟಿಸ್ ನೀಡುವುದು, ಸಾರ್ವಜನಿಕ ಪ್ರಕಟಣೆಯನ್ನು ಆಟೋ ಮೂಲಕ ಪ್ರಚಾರ ಪಡಿಸುವುದರೊಂದಿಗೆ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಳವಾಗಿ ಮನೆಗಳಿಗೆ ಹಾನಿಯಾದಲ್ಲಿ ತಾಲ್ಲೂಕು ಆಡಳಿತದಿಂದ ಸ್ಥಾಪಿಸಲಾಗುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಬಗ್ಗೆ ಕ್ರಮವಹಿಸಲಾಗಿದೆ.”
-ಗಿರೀಶ್, ಮುಖ್ಯಾಧಿಕಾರಿ, ಕುಶಾಲನಗರ ಪುರಸಭೆ.
” ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಟಾಸ್ಕ್ ಫೋರ್ಸ್ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗಿದೆ.”
-ಸಂತೋಷ್, ಪಿಡಿಒ, ಕೂಡುಮಂಗಳೂರು ಗ್ರಾಪಂ
” ಅತಿವೃಷ್ಟಿ ಸಂಭವಿಸಿದಲ್ಲಿ ಸಂಭವನೀಯ ಮುಳುಗಡೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರ ಪಟ್ಟಿ ತಯಾರಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ಗುರುತು ಮಾಡಲಾಗಿದೆ. ಈ ಬಾರಿ ಮುಂಗಾರನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.”
-ಎಂ.ಆರ್.ಸುಮೇಶ್, ಪಿಡಿಒ, ಗುಡ್ಡೆಹೊಸೂರು





