ಮೈಸೂರು:ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ ಜತೆಗೆ,ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದ ಸನ್ನಿವೇಶ ನಿರ್ಮಾಣವಾಗಿದ್ದು,ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಜತೆಗೆ, ಕಾಮಗಾರಿಗೆ ಅಗತ್ಯ ಅನುದಾನದ ಕುರಿತು ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಗಿದೆ.
ನಗರದ ದಟ್ಟಗಳ್ಳಿ ಕನಕದಾಸನಗರ ೨ನೇಹಂತದ ಕೌಟಿಲ್ಯ ಶಾಲೆಯ ಮಾರ್ಗದಲ್ಲಿ ಹರಿದು ಹೋಗುವ ಒಳಚರಂಡಿ ನೀರು,ಲಿಂಗಾಂಬುಧಿ ಕೆರೆಗೆ ರಾಜಕಾಲುವೆ ಮೂಲಕ ಹರಿದು ಹೋಗುವ ಮಲಿನ ನೀರನ್ನು ತಡೆಯುವ ಕುರಿತು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಸಿಎಫ್ ರವೀಂದ್ರ, ವಲಯ ೩ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಹಲವಾರು ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿದರು. ಯುಜಿಡಿ ಮಾರ್ಗದ ಪೈಪ್‌ಲೈನ್ ಒಡೆದಿರುವ ಜಾಗ, ಸಂಜೆ ಹೊತ್ತು ಯುಜಿಡಿ ನೀರು ರಿವರ್ಸ್ ಆಗಿ ಅಕ್ಕಪಕ್ಕದ ಮನೆಗಳಿಗೆ ಎದುರಾಗುವ ಸಮಸ್ಯೆಗಳು, ಲಿಂಗಾಂಬುಧಿ ಕೆರೆಯ ಒಳಗೆ ಆಗಬೇಕಿರುವ ಕೆಲಸಗಳ ಕುರಿತು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರಪಾಲಿಕೆ, ಎಂಡಿಎ,ಅರಣ್ಯ ಇಲಾಖೆ ಮುಂತಾದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮಸ್ಯೆ ಬಿಚ್ಚಿಟ್ಟ ನಿವಾಸಿಗಳು: ಎಂ.ಎನ್. ನಟರಾಜು ಎಂಬವರು ಮಾತನಾಡಿ, ಕನಕದಾಸನಗರ,ದಟ್ಟಗಳ್ಳಿ ಭಾಗದ ಯುಜಿಡಿ ಲೈನ್ ಆಗಿಂದಾಗ್ಗೆ ಕಟ್ಟಿಕೊಳ್ಳುತ್ತದೆ. ರಾಜಕಾಲುವೆ ಬಳಿ ಹಾದು ಹೋಗಿರುವ ಪೈಪ್‌ಲೈನ್ ಒಡೆದುಹೋಗಿರುವ ಕಾರಣ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಮನೆಗಳಿಗೆ ವಾಸನೆ ಬೀರುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.
ನಾಗೇಂದ್ರಪ್ರಸಾದ್ ಎಂಬವರು ಮಾತನಾಡಿ, ಬೋಗಾದಿ,ಆನಂದನಗರ ಮತ್ತಿತರ ಕಡೆಗಳಿಂದ ಹರಿದು ಬರುವ ನೀರು ನೇರವಾಗಿ ಎಡಿಬಿ ಲೈನ್ ಮೂಲಕ ರಾಯನಕೆರೆಗೆ ಹೋಗುವಂತೆ ಮಾಡಬೇಕು. ಲಿಂಗಾಂಬುಧಿ ಕೆರೆಗೆ ಕಲುಷಿತ ನೀರು ಸೇರುವುದರಿಂದ ವಾಯುವಿಹಾರಿಗಳಿಗೆ ತೊಂದರೆಯಾಗಿದೆ. ಕೆಲವು ಮರಗಳು ಒಣಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂದರು. ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಮಾಡಿ ಚರಂಡಿ ನೀರು ಹೋಗಲು ಪೈಪ್‌ಲೈನ್ ಅಳವಡಿಸಬೇಕಿದೆ.
ಬ್ರಿಡ್ಜ್ ಬದಲಿಗೆ ಸೇತುವೆ, ವಾಕಿಂಗ್ ಪಾತ್ಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೆರೆಯಲ್ಲಿನ ನೀರಿನ ಸ್ಯಾಂಪಲ್ ತೆಗೆದುಕೊಂಡು ಹೋದರು,ಆದರೆ ಅದರ ಫಲಿತಾಂಶ ಮಾತ್ರ ಗೊತ್ತಾಗಿಲ್ಲ ಎಂದು ಸಮಸ್ಯೆ ಬಿಡಿಸಿಟ್ಟರು. ಮತ್ತೋರ್ವ ನಿವಾಸಿ ರಾಜು ಮಾತನಾಡಿ, ರಾತ್ರಿ ವೇಳೆ ವಾಸನೆ ಬೀರುತ್ತಿದೆ. ಬೆಳಿಗ್ಗೆ ವಾಕಿಂಗ್ ಮಾಡಲಾಗುತ್ತಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕೆರೆಯ ಅಕ್ಕಪಕ್ಕ ಬೆಳೆದಿರುವ ಗಿಡಗಳನ್ನು ತೆಗೆಸಬೇಕು ಎಂದು ಕೋರಿದರು.
ಇದೇ ರೀತಿ ಅನೇಕ ನಿವಾಸಿಗಳು ಹಲವಾರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಎಲ್ಲರ ಮನವಿಗಳನ್ನು ಆಲಿಸಿದ ಶಾಸಕರು, ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ, ಅಧೀಕ್ಷಕ ಅಭಿಯಂತರ ಮಂಜು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಇ ಅಸೀಫ್ ಇಕ್ಬಾಲ್ ಖಲೀಲ್, ನಗರಪಾಲಿಕೆ ಒಳಚರಂಡಿ ವಿಭಾಗದ ಇಇ ಶಿಲ್ಪಾ, ಎಇಇ ಗಳಾದ ಧನುಷ್, ಶ್ರೀನಿವಾಸ್, ಅಶ್ವಿನ್ ಮತ್ತಿತರರು ಹಾಜರಿದ್ದರು.
” ಲಿಂಗಾಂಬುಧಿ ಕೆರೆಗೆ ಕಲುಷಿತ ನೀರು ಸೇರದಂತೆ ಕಾಮಗಾರಿ ಆರಂಭಿಸಲಾಗುವುದು. ಎಲ್ಲೆಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸಬೇಕು, ರಿಟೈನಿಂಗ್ ವಾಲ್ ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದು ತಕ್ಷಣ ಕ್ರಮಕೈಗೊಳ್ಳಲಾಗುವುದು.”
-ಶೇಖ್ ತನ್ವೀರ್ ಆಸಿಫ್, ನಗರಪಾಲಿಕೆ ಆಯುಕ್ತ
ಶಾಲೆ ಆಟದ ಮೈದಾನವಾಗಿ ಪಾರ್ಕ್ ಬಳಕೆ:ದೂರು ಲಿಂಗಾಂಬುಧಿ ಕೆರೆಗೆ ಹೊಂದಿಕೊಂಡಂತೆ ಇರುವ ಪಾರ್ಕ್ ಅನ್ನು ಖಾಸಗಿ ಶಾಲೆಯವರು ಆಟದ ಮೈದಾನವಾಗಿ ಹಾಗೂ ವಾಹನಗಳ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ, ಇದಕ್ಕೆ ಅವಕಾಶ ನೀಡದೆ ಪಾರ್ಕ್ ಅನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ನಿವಾಸಿಗಳು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಪಾಲಕೆ ಆಯುಕ್ತರು, ಕೂಡಲೇ ತೆರವುಗೊಳಿಸುವುದಾಗಿ ತಿಳಿಸಿದರು.





