Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಮೈಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಿದ್ಧತೆ

ಕೆ.ಬಿ.ರಮೇಶನಾಯಕ

ಕೋಟೆ ತಾಲ್ಲೂಕಿನ ಕೆ.ಈರೇಗೌಡ ಅವಿರೋಧ ಆಯ್ಕೆ ಸಾಧ್ಯತೆ

ಅಧ್ಯಕ್ಷ ಸ್ಥಾನದ ಮೇಲೆ ಬಿ.ಗುರುಸ್ವಾಮಿ ಕಣ್ಣು 

ಆರ್.ಚೆಲುವರಾಜು ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ

ಮೈಸೂರು: ಹೈನುಗಾರಿಕೆ ಮಾಡುವ ಲಕ್ಷಾಂತರ ಹಾಲು ಉತ್ಪಾದಕರ ಸಂಸ್ಥೆಯಾಗಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್)ದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.

ಮೈಮುಲ್ ಅಧ್ಯಕ್ಷರಾಗಿದ್ದ ಆರ್. ಚೆಲುವರಾಜು ಅವರ ರಾಜೀನಾಮೆ ಅಂಗೀಕಾರವಾಗಿದ್ದರಿಂದ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ. ಹೀಗಾಗಿ, ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಗಳು ಯಾವುದೇ ಕ್ಷಣದಲ್ಲಿ ದಿನಾಂಕ ಪ್ರಕಟಿಸಿ ನಿರ್ದೇಶಕರಿಗೆ ಸೂಚನಾ ಪತ್ರವನ್ನು ಕಳುಹಿಸಿಕೊಡಲು ತಯಾರಿನಡೆಸಿದ್ದಾರೆ ಎಂದು ಹೇಳಲಾಗಿದೆ.

೨೦೨೧ರ ಮಾರ್ಚ್ ೩ರಂದು ನಡೆದಿದ್ದ ಮೈಮುಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ನಂತರ, ಮಾ.೧೬ ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾ ವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಕೆ.ಮಹದೇವ ಅವರ ಪುತ್ರ ಪಿ.ಎಂ.ಪ್ರಸನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆದರೆ, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆ.ಮಹದೇವ್ ಸೋತು, ಕೆ. ವೆಂಕಟೇಶ್ ಅವರು ಆಯ್ಕೆಯಾಗಿ ಪಶು ಸಂಗೋಪನಾ ಸಚಿವರಾದರು. ಇದ ರಿಂದಾಗಿ ಮೈಮುಲ್‌ನಲ್ಲಿ ಹಲವಾರು ಬೆಳವಣಿಗೆಗಳು ನಡೆಯಲು ಶುರುವಾಗಿದ್ದರಿಂದ ೨೦೨೪ ಆಗಸ್ಟ್ ತಿಂಗಳಲ್ಲಿ ಪಿ. ಎಂ.ಪ್ರಸನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಚೆಲುವರಾಜು ಆಯ್ಕೆಯಾದರು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ನಿರ್ದೇಶಕ ಕೆ.ಈರೇಗೌಡ ಅವರಿಗೆ ಆಂತರಿಕವಾಗಿ ಅಧಿಕಾರ ಹಂಚಿಕೆ ಮಾಡಿ ಹತ್ತು ತಿಂಗಳು ಬಿಟ್ಟುಕೊಡುವ ತೀರ್ಮಾನ ಮಾಡಲಾಗಿತ್ತು. ಹೀಗಾಗಿ, ಚೆಲುವರಾಜು ಅವರು ರಾಜೀನಾಮೆ ನೀಡಬೇಕಾಗಿತ್ತಾದರೂ ಜಿಲ್ಲಾ ಉಸ್ತುವಾರಿಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್ ಅವರ ಮನವೊಲಿಸಿ ಅಧಿಕಾರದಲ್ಲಿ ಮುಂದುವರಿಯಲು ಪ್ರಯತ್ನಿಸಿದ್ದರು.

ಆದರೆ, ಈರೇಗೌಡರು ಒಪ್ಪಂದದಂತೆ ರಾಜೀನಾಮೆ ಕೊಡಿಸುವಂತೆ ಅನೇಕ ನಾಯಕರ ಮೇಲೆ ಒತ್ತಡ ತಂದ ಫಲವಾಗಿ ಸೆ.೯ರಂದು ರಾಜೀನಾಮೆ ನೀಡಿದ್ದರು. ಇದೀಗ ನಿಯಮಾನುಸಾರ ಹದಿನೈದು ದಿನಗಳ ನಂತರ ರಾಜೀನಾಮೆ ಅಂಗೀಕಾರಗೊಂಡು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ.

ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ದಿನಾಂಕ ಪ್ರಕಟ ಮಾಡುತ್ತಿದ್ದಂತೆ ಡಿಆರ್‌ಸಿಎಸ್ ಅವರು ಸದಸ್ಯರಿಗೆ ವಿಶೇಷ ಸಭೆಯ ಸೂಚನಾ ಪತ್ರವನ್ನು ಹೊರಡಿಸುವ ಸಾಧ್ಯತೆ ಇದೆ.

ಅವಿರೋಧ ಆಯ್ಕೆ ಸಾಧ್ಯತೆ: ಮೈಮುಲ್‌ನ ಐದು ವರ್ಷಗಳ ಅವಧಿಯಲ್ಲಿ ಈಗಾಗಲೇ ನಾಲ್ಕು ವರ್ಷಗಳು ಮುಗಿದಿದ್ದು, ೨೦೨೬ರ ಮಾರ್ಚ್ ತಿಂಗಳಲ್ಲಿ ನಿರ್ದೇಶಕರ ಅವಧಿ ಮುಗಿಯಲಿದೆ. ಹೀಗಾಗಿ, ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಈರೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಈರೇಗೌಡರು ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಇವರನ್ನು ಮೈಮುಲ್ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕಾರಣಕ್ಕಾಗಿ ಸಚಿವರು, ಸಂಸದರ ಜೊತೆಗೆ ನಿರಂತರವಾಗಿ ಸಭೆ ನಡೆಸಿ ಚೆಲುವರಾಜು ಅವರ ರಾಜೀನಾಮೆ ಕೊಡಿಸಲು ಮನವೊಲಿಸುವಲ್ಲಿ ಅನಿಲ್  ಸಫಲವಾಗಿದ್ದರು. ಹೀಗಾಗಿ, ಈರೇಗೌಡರು ಅಧ್ಯಕ್ಷರಾದರೆ ಸಹಕಾರ ಕ್ಷೇತ್ರದಲ್ಲಿ ಅನಿಲ್ ಚಿಕ್ಕಮಾದು ಪ್ರಾಬಲ್ಯ ಹೆಚ್ಚಾಗುತ್ತದೆ.

ನಾಮ ನಿರ್ದೇಶಿತ ಸದಸ್ಯ ಬಿ.ಗುರುಸ್ವಾಮಿ ಕಣ್ಣು:  ಮತ್ತೊಂದೆಡೆ ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಹೆಸರು ಕೇಳಿಬಂದಿದ್ದ ನಾಮನಿರ್ದೇಶಿತ ನಿರ್ದೇಶಕ ಬಿ.ಗುರುಸ್ವಾಮಿ ಮೈಮುಲ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ತಾಲ್ಲೂಕಿನ ಪ್ರಮುಖರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೊಂದು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಚುನಾವಣೆಗೆ ದಿನಾಂಕ ನಿಗದಿಯಾದ ಮೇಲೆ ಎಲ್ಲ ನಿರ್ದೇಶಕರ ಸಭೆಯನ್ನು ಕರೆದು ಮಾತನಾಡುವೆ ಎಂಬುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆಂದು ಮೂಲಗಳು ಹೇಳಿವೆ.

Tags:
error: Content is protected !!