ನವೀನ್ ಡಿಸೋಜ
ಕೋಯಿಮ್ಸ್‌ನಲ್ಲಿ ಉತ್ತಮ ಆರೋಗ್ಯ ಸೇವೆ; ಅತ್ಯಾಧುನಿಕ ಲ್ಯಾಬ್‌ಗಳಿಂದ ಸಾಂಕ್ರಾಮಿಕ ರೋಗ ಪತ್ತೆಗೆ ಅನುಕೂಲ
ಮಡಿಕೇರಿ: ಕೊಡಗು ವೈದ್ಯಕೀಯ ಸಂಸ್ಥೆಯಲ್ಲಿ ರೋಗಿಗಳಿಗಾಗಿ ಒಂದೊಂದಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ವಿಆರ್‌ಡಿಎಲ್ ಸೇವೆ ಆರಂಭದ ಬೆನ್ನಲ್ಲೇ ಐಪಿಎಚ್‌ಎಲ್ ಲ್ಯಾಬ್ ಆರಂಭಿಸಲು ಸಿದ್ಧತೆ ನಡೆದಿದೆ.
ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾದ ಬಳಿಕ ಜಿಲ್ಲೆಯಲ್ಲಿ ಹಲವು ಆರೋಗ್ಯ ಸೇವೆಗಳು ಲಭ್ಯವಾಗುತ್ತಿವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರಬೇಕಾದ ಸೇವೆಗಳು ಒಂದೊಂದಾಗಿ ದೊರಕುತ್ತಿದ್ದು, ಅದರ ಸಾಲಿಗೀಗ ಎರಡು ಪ್ರಮುಖ ಪ್ರಯೋಗಾಲಯಗಳು ಸೇರ್ಪಡೆಯಾಗುತ್ತಿವೆ.
ಈಗಾಗಲೇ ಬಹುತೇಕ ಎಲ್ಲ ರೀತಿಯ ಪರೀಕ್ಷೆಗಳನ್ನು ಕೋಯಿಮ್ಸ್‌ನಲ್ಲಿಯೇ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೊರ ಜಿಲ್ಲೆಗಳ ಅವಲಂಬನೆ ಸಂಪೂರ್ಣವಾಗಿ ಇಲ್ಲದಾಗಲಿದೆ. ಅತಿ ಕಡಿಮೆ ಸಮಯದಲ್ಲಿ ಕೋಯಿಮ್ಸ್‌ನಲ್ಲಿಯೇ ಎಲ್ಲಾ ರೀತಿಯ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ರಾಜ್ಯ ಸರಕಾರ ೨೦೨೪-೨೫ನೇ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ವಿಆರ್‌ಡಿಎಲ್(ವೈರಲ್ ರೀಸರ್ಚ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ) ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಅದರಂತೆ ೧.೯೭ ಕೋಟಿ ರೂ. ವೆಚ್ಚದಲ್ಲಿ ಕೋಯಿಮ್ಸ್‌ನಲ್ಲಿ ವಿಆರ್‌ಡಿಎಲ್ ಪ್ರಯೋಗಾಲಯ ಆರಂಭವಾಗಿದ್ದು, ಜನರಿಗೆ ಸೇವೆ ನೀಡುತ್ತಿದೆ.
ಈ ಪ್ರಯೋಗಾಲಯದಿಂದ ವೈರಲ್ ರೋಗಗಳಾದ ಎಚ್೧ಎನ್೧, ಕೋವಿಡ್ ೧೯ ಮತ್ತಿತರ ರೋಗಗಳ ಪರೀಕ್ಷೆ ಇಲ್ಲಿಯೇ ನಡೆಸಲಾಗುತ್ತಿದೆ. ಆರ್‌ಟಿ-ಪಿಸಿಆರ್, ಇಎಲ್ ಐಎಸ್‌ಎ ಮುಂತಾದ ವಿಧಾನಗಳಿಂದ ವೈರಾಣು ರೋಗಗಳ ಪತ್ತೆ ಮಾಡುವ ಸೌಲಭ್ಯ ಈ ಪ್ರಯೋಗಾಲಯಗಳಲ್ಲಿದ್ದು, ಹಿಂದಿನಂತೆ ಇಂತಹ ವೈರಲ್ ಪರೀಕ್ಷೆಗಾಗಿ ಬೇರೆ ಜಿಲ್ಲೆಗಳಿಗೆ ರಕ್ತ ಅಥವಾ ಸ್ವ್ಯಾಬ್ ಮಾದರಿ ಕಳುಹಿಸುವುದು, ಅಲ್ಲಿಂದ ವರದಿ ಬರುವವರೆಗೆ ಕಾಯುವ ಪರಿಸ್ಥಿತಿ ತಪ್ಪಿದೆ.
ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಕೊಡಗಿನಲ್ಲಿ ಪದೇ ಪದೇ ವೈರಸ್ ಆತಂಕ ಮನೆಮಾಡುತ್ತದೆ. ಕೋವಿಡ್‌ನ ಹೊಸ ರೂಪಾಂತರಿಗಳು ಸೇರಿದಂತೆ ಹೊಸ ವೈರಸ್ ಕಾಯಿಲೆಗಳು ಇತ್ತೀಚೆಗೆ ಕೇರಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆಯಾದರೂ ವೈರಸ್ ಪತ್ತೆಗೆ ಬೇರೆ ಜಿಲ್ಲೆಗಳ ಪ್ರಯೋಗಾಲಯಗಳನ್ನು ಅವಲಂಭಿಸಬೇಕಿತ್ತು. ಈಗ ವಿಆರ್‌ಡಿಎಲ್ ಆರಂಭವಾಗಿರುವುದರಿಂದ ಅಂತಹ ಪರಿಸ್ಥಿತಿಯಲ್ಲಿ ವೈರಸ್ ಪತ್ತೆಹಚ್ಚಲು ಮತ್ತು ಹೊಸ ವೈರಸ್ ಬಗ್ಗೆ ಸಂಶೋಧನೆಗೂ ಅನುಕೂಲವಾಗಿದೆ.
ಇದರೊಂದಿಗೆ ಐಪಿಎಚ್‌ಎಲ್ (ಇಂಟಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೋರೇಟರಿ) ಆರಂಭಕ್ಕೂ ಸಿದ್ಧತೆ ನಡೆದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಡಿ ದೇಶದ ಎಲ್ಲ ಜಿಲ್ಲೆಗಳಲ್ಲಿಯೂ ಐಪಿಎಚ್‌ಎಲ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳು ಒಂದೇ ಸೂರಿನಡಿ ನಡೆಯಲಿವೆ. ಅದರಂತೆ ಕೋಯಿಮ್ಸ್‌ನಲ್ಲಿ ಐಪಿಎಚ್‌ಎಲ್ ಆರಂಭಕ್ಕೆ ಸಿದ್ಧತೆ ಮಾಡಲಾಗಿದ್ದು, ಕೋಯಿಮ್ಸ್‌ನ ತುರ್ತು ವಿಭಾಗದ ಹೊಸ ಕಟ್ಟಡದ ನೆಲ ಅಂತಸ್ತಿನಲ್ಲಿ ಈ ಪ್ರಯೋಗಾಲಯ ಆರಂಭವಾಗಲಿದೆ.
ಐಪಿಎಚ್‌ಎಲ್ ಲ್ಯಾಬ್‌ನಲ್ಲಿ ಡೆಂಗ್ಯು, ಎನ್ ಎಸ್೧, ಸೆರಾಲಜಿ, ಚಿಕುನ್ ಗುನ್ಯಾ, ಮಲೇರಿಯಾ ಪಿಸಿಆರ್, ಟೈಫಾಯಿಡ್ ಪಿಸಿಆರ್, ಲೆಪ್ಟೋಸ್ಪ್ರೆರೋಸಿಸ್ ಸೇರಿದಂತೆ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಽಸಿದಂತೆ ಹಲವು ಪರೀಕ್ಷೆಗಳು ಒಂದೇ ಸೂರಿನಡಿ ನಡೆಯಲಿದೆ. ಇದರೊಂದಿಗೆ ನೀರಿನ ಮಾಲಿನ್ಯ, ಆಹಾರದಮೂಲಕ ಹರಡುವ ಕಾಯಿಲೆಗಳಿಗೂವಿಶಿಷ್ಟ ಪರೀಕ್ಷಾ ವ್ಯವಸ್ಥೆ ಇರಲಿದೆ. ಈ ಪ್ರಯೋಗಾಲಯ ಕಾರ್ಯಾರಂಭಿಸುವುದರಿಂದ ಬೇರೆ ಜಿಲ್ಲೆಗಳನ್ನು ಅವಲಂಬಿಸುವುದರಿಂದಾಗುತ್ತಿದ್ದ ಸಮಯ ಹಾಗೂ ಹಣ ಎರಡೂ ಉಳಿಯುವುದರೊಂದಿಗೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಾಗ ತಕ್ಷಣ ಪರೀಕ್ಷಿಸಿ ಚಿಕಿತ್ಸೆ ನೀಡಲೂ ಅನುಕೂಲವಾಗಲಿದೆ.
” ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ವಿಆರ್‌ಡಿಎಲ್ ಪ್ರಯೋಗಾಲಯ ಈಗಾಗಲೇ ಆರಂಭಗೊಂಡು ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಈಗ ಕೇಂದ್ರದ ಐಪಿಎಚ್ ಎಲ್ ಕೂಡ ಆರಂಭವಾಗುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಎಲ್ಲ ರೀತಿಯ ಲ್ಯಾಬ್‌ಗಳೂ ಒಂದೇ ಸೂರಿನಡಿಗೆ ತರಲಾಗುತ್ತಿದ್ದು, ಶೀಘ್ರದಲ್ಲಿ ಪರೀಕ್ಷಾ ವರದಿಗಳು ದೊರೆಯುವುದರೊಂದಿಗೆ ಅಧ್ಯಯನಕ್ಕೂ ಇದರಿಂದ ಅನುಕೂಲವಾಗಲಿದೆ.”
-ಡಾ.ನಸೀಮ ತಬ್ಸೀರಾ, ವಿಭಾಗ ಮುಖ್ಯಸ್ಥರು , ಮೈಕ್ರೋ ಬಯಾಲಜಿ, ಕೋಯಿಮ್





