ರಾಜ್ಯ, ಕೇಂದ್ರ ಸರ್ಕಾರಗಳಿಂದ ಒಟ್ಟು ೪೬ ಕೋಟಿ ರೂ. ಅನುದಾನ
ಆಗಸ್ಟ್‌ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯ ಕಾಮಗಾರಿ ಪ್ರಾರಂಭ
ಕೆ.ಬಿ.ರಮೇಶ್ ನಾಯಕ
ಮೈಸೂರು: ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ‘ಪ್ರಶಾದ್’ ಯೋಜನೆ ಅಡಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದ್ದು, ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಚಾಮುಂಡಿಬೆಟ್ಟಕ್ಕೆ ಹೊಸ ಸ್ಪರ್ಶದ ಮೆರುಗು ದೊರೆಯಲಿದೆ.
‘ಪ್ರಶಾದ್’ ಯೋಜನೆಗೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಣ ಬಿಡುಗಡೆಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪೆನಿಯೊಂದಕ್ಕೆ ಟೆಂಡರ್ ಕೂಡ ನೀಡಲಾಗಿದೆ.
ಕೇಂದ್ರ ಸರ್ಕಾರವು ‘ಪ್ರಶಾದ್’ (ದಿ ಪಿಲ್‌ಗ್ರಿಮೇಜ್ ರಿಜುವೆನೇಷನ್ ಅಂಡ್ ಸ್ಪಿರಿಚುವಲ್ ಹೆರಿಟೇಜ್ ಆಗ್ಯುಮೆಂಟೇಷನ್ ಡ್ರೈವ್) ಯೋಜನೆಯಲ್ಲಿ ದೇಶದ ೪೭ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿತ್ತು. ಇದರಲ್ಲಿ ರಾಜ್ಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಆಯ್ಕೆ ಮಾಡಲಾಗಿದೆ.
ಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆ ಇರುವ ಕಾರಣ ಕೇಂದ್ರ ಸರ್ಕಾರ ಪ್ರಶಾದ್ ಯೋಜನೆ ಅಡಿಯಲ್ಲಿ ಇಡೀ ರಾಜ್ಯದಲ್ಲಿ ಚಾಮುಂಡಿಬೆಟ್ಟದ ದೇವಾಲಯವನ್ನು ಮಾತ್ರ ಆಯ್ಕೆ ಮಾಡಿದೆ. ದೇವಸ್ಥಾನದ ಸುತ್ತಮುತ್ತಲ ಸ್ಥಳಗಳನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿತ್ತು. ಡಿಪಿಆರ್ ಪರಿಶೀಲನೆ ಮಾಡಿದ್ದ ಕೇಂದ್ರ ಸರ್ಕಾರ ಕೆಲವು ಸಲಹೆ, ಮಾರ್ಗದರ್ಶನದೊಂದಿಗೆ ಮಾರ್ಪಾಡು ಮಾಡಿ ಅಂತಿಮ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿತ್ತು. ಅದರಂತೆ ಈಗ ಪ್ರವಾಸೋದ್ಯಮ ಇಲಾಖೆ ಸಲ್ಲಿಸಿರುವ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಜೊತೆಗೆ ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನೂ ಬಿಡುಗಡೆ ಮಾಡಿದೆ.
೬ ಸ್ಥಳಗಳಿಗೆ ಕಾಯಕಲ್ಪ: ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ೬ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಇದರಲ್ಲಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಇರುವ ಮಹಿಷಾಸುರನ ಪ್ರತಿಮೆಯ ಸುತ್ತಲಿನ ಪ್ಲಾಜಾದಲ್ಲಿ ನೀರಿನ ಕಾರಂಜಿ ನಿರ್ಮಿಸಿ, ಅದಕ್ಕೆ ವರ್ಣರಂಜಿತ ವಿದ್ಯುತ್ ದೀಪಾಲಂಕಾರದ ಮೆರುಗು ನೀಡಲಾಗುತ್ತದೆ. ಪ್ರವಾಸಿಗರು ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ನೆರವಿಗೆ ಧಾವಿಸಲು ಪೊಲೀಸ್ ಬೂತ್ ನಿರ್ಮಿಸಲಾಗುವುದು. ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ವಿವರ ನೀಡಲು ಪ್ರವಾಸಿ ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತದೆ. ಅತ್ಯಾಕರ್ಷಕ ಕಲ್ಲಿನ ಪ್ರವೇಶದ್ವಾರ ನಿರ್ಮಿಸಿ, ಸಾಲು ಮಂಟಪಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನದ ಸುತ್ತಮುತ್ತ ಭಕ್ತರು ವಿರಮಿಸಲು ಅಲ್ಲಲ್ಲಿ ಕಲ್ಲಿನ ಆಸನಗಳ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಚಾಮುಂಡಿಬೆಟ್ಟದ ಮೆಟ್ಟಿಲುಗಳ ನವೀಕರಣ, ದೇವಿಕೆರೆಯಲ್ಲಿ ಕಲ್ಲಿನ ಪ್ರವೇಶ ದ್ವಾರ, ಅಲ್ಲಲ್ಲಿ ಉದ್ಯಾನವನಗಳ ನಿರ್ಮಾಣ ಸೇರಿದಂತೆ ಬೆಟ್ಟದ ಪ್ರಾಕೃತಿಕ ಸೌಂದರ್ಯವನ್ನು ವೃದ್ಧಿಗೊಳಿಸುವ ಯೋಜನೆ ಯನ್ನು ರೂಪಿಸಲಾಗಿದೆ.
ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ : ಚಾಮುಂಡಿಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದಸರಾ, ಆಷಾಢ ಶುಕ್ರವಾರ, ವರ್ಧಂತಿ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವುದೇ ತೊಂದರೆ ಆಗದಂತೆ ಭದ್ರತೆ ಒದಗಿಸಲು ಎಚ್‌ಡಿ ಗುಣಮಟ್ಟದ ಸಿಸಿಟಿವಿಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ.
ಮೆಟ್ಟಿಲುಗಳ ಮಾರ್ಗವಾಗಿ ಬೆಟ್ಟ ಹತ್ತುವರ ಸಂಖ್ಯೆ ಹೆಚ್ಚಾಗಿರುವ ಕಾರಣ, ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ರೇಲಿಂಗ್ಸ್ ಅಳವಡಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ಪ್ರವೇಶ ದ್ವಾರದಿಂದ ಗೋಪುರದವರೆಗೆ ಕಾಂಕ್ರೀಟ್ ರಸ್ತೆನಿರ್ಮಾಣ, ಮೈಸೂರು-ಚಾ.ಬೆಟ್ಟ ಮಾರ್ಗದಲ್ಲಿರುವ ವ್ಯೂ ಪಾಯಿಂಟ್ ಹಾಗೂ ನಂದಿ ವಿಗ್ರಹದ ಬಳಿ ಇರುವ ವ್ಯೂ ಪಾಯಿಂಟ್‌ನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ದೇವಸ್ಥಾನದ ಬಳಿ ಪಾರಂಪರಿಕ ಶೈಲಿಯ ಸಾಲು ಮಂಟಪಗಳ ನಿರ್ಮಾಣ, ಭಕ್ತರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತದೆ. ಪಾದರಕ್ಷೆ ಬಿಡುವ ಸ್ಥಳ, ಪ್ರವಾಸಿಗರು ತಮ್ಮ ವಸ್ತುಗಳನ್ನು ಇಡುವ ಕ್ಲಾಕ್ ರೂಂಗಳ ನಿರ್ಮಾಣ, ಮಹಿಷಾಸುರನ ಪ್ರತಿಮೆಯ ಸ್ಥಳದಿಂದ ದೇವಸ್ಥಾನದವರೆಗೆ ಮೈಕ್‌ಗಳನ್ನು ಅಳವಡಿಸಿ, ಅನೌನ್ಸ್ ಮೆಂಟ್ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.
೪೬ ಕೋಟಿ ರೂ. ಅನುದಾನ:
ಚಾಮುಂಡೇಶ್ವರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ೩೦ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ ೧೬ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮೂಲಕ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ೪೬ ಕೋಟಿ ರೂ. ದೊರೆತಂತಾಗಿದೆ. ಚಾಮುಂಡಿಬೆಟ್ಟದ ಸೌಂದರ್ಯಕ್ಕೆ ಧಕ್ಕೆಯಾದರೆ ಪರಿಸರವಾದಿಗಳ ಆಕ್ರೋಶ ವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ದೇವಸ್ಥಾನವನ್ನು ಅಭಿವೃದ್ಧಿ ಮಾಡಲು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಸಿ ತ್ರಿಡಿ ಇಮೇಜ್ ರೂಪಿಸಿದ್ದಾರೆ.
” ಮಂಗಳೂರು, ಉಡುಪಿ, ಕಾರ್ಕಳ ಸೇರಿದಂತೆ ಹಲವು ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದಂತೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿತ್ತು. ಈಗ ಟೆಂಡರ್ ಪಡೆದಿರುವ ಕಂಪೆನಿ ಭದ್ರತಾ ಠೇವಣಿ ಪಾವತಿ ಮಾಡಿ, ಇನ್ನು ಹಲವು ದಾಖಲಾತಿಗಳನ್ನು ಸಲ್ಲಿಸಬೇಕಿದೆ. ಅದಕ್ಕೆ ಅನುಮೋದನೆ ನೀಡಿದ ಮೇಲೆ ಪ್ರಾಯಶಃ ಮಾಸಾಂತ್ಯಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.”
-ಪುರುಷೋತ್ತಮ್, ಎಇಇ, ಪ್ರವಾಸೋದ್ಯಮ ಇಲಾಖೆ, ಮೈಸೂರು
” ಚಾಮುಂಡಿಬೆಟ್ಟ ದೇವಸ್ಥಾನದ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ನಾವೇ ನಿಂತು ಪರಿಶೀಲನೆ ನಡೆಸುತ್ತೇವೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಯೋಜನೆ ರೂಪಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಇರುವ ನಾವು ಅಭಿವೃದ್ಧಿ ಯಾವ ರೀತಿ ನಡೆಯುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ.”
-ಮೋತಿಲಾಲ್,ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಮೈಸೂರು





