Mysore
22
scattered clouds

Social Media

ಭಾನುವಾರ, 11 ಜನವರಿ 2026
Light
Dark

ದೊಡ್ಡ ಹೆಜ್ಜೂರು ಆಂಜನೇಯಸ್ವಾಮಿ ರಥೋತ್ಸವಕ್ಕೆ ಸಿದ್ಧತೆ

ದಾ.ರಾ.ಮಹೇಶ್

ಜ.೧೫ರಿಂದ ೧೮ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು; ಗಿರಿಜನರು ಹೆಚ್ಚಾಗಿ ಭಾಗಿಯಾಗುವ ಜಾತ್ರೆ

ವೀರನಹೊಸಹಳ್ಳಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಜ.೧೫ರಿಂದ ಆಂಜನೇಯ ಸ್ವಾಮಿ ರಥೋತ್ಸವ ನಡೆಯಲಿದ್ದು, ಗ್ರಾಮಸ್ಥರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದೊಡ್ಡಹೆಜ್ಜೂರು ಗ್ರಾಮದ ಬೃಹತ್ ಕೆರೆಗೆ ಹೊಂದಿಕೊಂಡಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಿರಿಜನರು ಹೆಚ್ಚಾಗಿ ಈ ದೇವರ ಭಕ್ತರಾಗಿರುವುದು ವಿಶೇಷ.

ಜ.೧೫ರಂದು ಸಂಜೆ ಆರಂಭವಾಗುವ ಪೂಜಾ ವಿಧಿ-ವಿಧಾನಗಳು ೧೮ರಂದು ಕೊನೆಗೊಳ್ಳುತ್ತವೆ. ದೊಡ್ಡಹೆಜ್ಜೂರು ಕೆರೆ ಅಂಗಳಕ್ಕೆ ಹೊಂದಿಕೊಂಡಿರುವ ದೇವಸ್ಥಾನ ಪ್ರಕೃತಿಪ್ರಿಯರ ಮೆಚ್ಚಿನ ತಾಣವೂ ಆಗಿದೆ.

ಪರಿಶುದ್ಧ ಗಾಳಿ ಮತ್ತು ಹಸಿರು ಸಿರಿಯಿಂದ ಕಂಗೊಳಿಸುವ ಈ ಪ್ರದೇಶದಲ್ಲಿ ದಶಕಗಳ ಹಿಂದೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಬೀಟೆ ಮರದಿಂದ ನಿರ್ಮಿಸಿದ ಒತ್ತುಗಂಬಗಳು ಆಕರ್ಷಣೀಯವಾಗಿವೆ. ದೇವ ಸ್ಥಾನದೊಳಗೆ ೬ ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ವಿವಾಹ ಸಂಬಂಧ ಬೆಸೆಯುವ ಕೊಂಡಿ: ಆಂಜನೇಯಸ್ವಾಮಿ ಎಂದೊಡನೆ ಬ್ರಹ್ಮಚಾರಿ ಎಂದೇ ಗುರುತಿಸುತ್ತಾರೆ. ಆದರೆ ದೊಡ್ಡಹೆಜ್ಜೂರು ಗ್ರಾಮದ ಆಂಜನೇಯ ವಿಭಿನ್ನ. ಹೊಸದಾಗಿ ವಿವಾಹವಾದ ದಂಪತಿ ಜಾತ್ರೆಯಲ್ಲಿ ಭಾಗವಹಿಸಿ ರತೋತ್ಸವದಂದು ರಥಕ್ಕೆ ಬಾಳೆಹಣ್ಣು, ಜವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

ಗಿರಿಜನರ ಆಚರಣೆ ಇದಕ್ಕಿಂತ ತುಸು ಭಿನ್ನವಾಗಿದೆ. ಗಿರಿಜನರ ಸಂಪ್ರದಾಯದಂತೆ ಕಂಕಣ ಕೂಡಿ ಬಂದ ನಂತರ ಮದುವೆಗೆ ಮುನ್ನ ಹುಡುಗಿಯೊಂದಿಗೆ ಹುಡುಗ ಒಂದು ರಾತ್ರಿ ಕಾಡಿನೊಳಗೆ ವಾಸ ಮಾಡಿ ಬಂದರೆ ಮದುವೆಯ ಒಪ್ಪಂದವಾದಂತೆ. ಜಾತ್ರೆಯಲ್ಲಿ ಹುಡುಗನ ಮನೆಯವರು ಹುಡುಗಿಗೆ ಹೂ ಮುಡಿಸಿದರೆ ಮದುವೆ ದೃಢಪಟ್ಟಂತೆ ಎನ್ನುತ್ತಾರೆ ಸ್ಥಳೀಯರು.

ಜಗಜಗಿಸುವ ಜಾತ್ರೆ: ಜಾತ್ರೆ ಪ್ರಯುಕ್ತ ದೇವಸ್ಥಾನವನ್ನು ವಿದ್ಯುತ್ ದೀಪಗಳು, ತಳಿರು- ತೋರಣಗಳಿಂದ ಅಲಂಕರಿಸಲಾಗಿದೆ. ಬಳೆ, ಬಿಚ್ಚೋಲೆ, ಸಿಹಿ ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳು ತಲೆ ಎತ್ತುತ್ತಿವೆ. ಒಟ್ಟಾರೆ ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ.

” ಜ.೧೫ರಂದು ಸಂಜೆ ೪.೩೦ಕ್ಕೆ ಕಳಸ ಪೂಜೆ, ರಾತ್ರಿ ೮ಗಂಟೆಗೆ ಗರುಡ ಪೂಜೆ, ೧೬ರಂದು ಮಧ್ಯಾಹ್ನ ೧೨.೩೦ರಿಂದ ೧.೩೦ರವರೆಗೆ ರಥೋತ್ಸವ, ೧೭ರಂದು ಪಂಜಿನ ಮೆರವಣಿಗೆ ಹಾಗೂ ಸಂಜೆ ೭.೩೦ಕ್ಕೆ ಪಾರುಪಟ್ಟೆ ಉತ್ಸವಗಳು ನಡೆಯಲಿವೆ. ಅಲ್ಲದೇ ಅಂದು ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.”

Tags:
error: Content is protected !!