ಮಾಗಳಿ ರಾಮೇಗೌಡ
ಉತ್ಸವ ಮೂರ್ತಿಗಳನ್ನು ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊತ್ತುಕೊಂಡು ಹೋಗುವುದು ವಿಶೇಷ
ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿಯ ದೀವಟಿಗೆ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮಂಗಳವಾರ ಸಂಜೆ ಬೆಟ್ಟದಪುರದಲ್ಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಿಂದ ಬೆಳ್ಳಿ ಬಸಪ್ಪ, ಗಣಪತಿ ಹಾಗೂ ಭ್ರಮರಾಂಬ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಗಳನ್ನು ಬೆಟ್ಟದ ಮೇಲಿರುವ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿಯೇ ತೆಗೆದುಕೊಂಡು ಹೋಗಲಾಗುತ್ತದೆ.
ಬುಧವಾರ ಮುಂಜಾನೆ ದೇವಾಲಯದ ಗುಡಿಯಲ್ಲಿ ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ. ದೇವರ ಉತ್ಸವಮೂರ್ತಿಗಳನ್ನು ಮೊದಲು ಬೆಟ್ಟದಪುರ, ಬೆಟ್ಟದತುಂಗ, ಕುಡುಕೂರು ಮಾರ್ಗವಾಗಿ ತೆಗೆದುಕೊಂಡು ಹೋಗುವರು. ಭಕ್ತಾದಿಗಳು ತಮ್ಮ ಮನೆಗಳ ಮುಂದೆ ಹಸಿರು ತೋರಣಗಳಿಂದ ಸಿಂಗರಿಸುವ ಚಪ್ಪರಗಳಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಭಕ್ತಿ-ಭಾವದಿಂದ ಪೂಜೆ ಸಲ್ಲಿಸುತ್ತಾರೆ.
ಬೆಟ್ಟದಪುರ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ತಮ್ಮ ಹರಕೆ ಹೊತ್ತು ಪಂಜಿನ ದೀವಟಿಗೆಯೊಂದಿಗೆ ಮಲ್ಲಯ್ಯನ ಜಾನ ಪದ ಹಾಡುಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ.
ಬೆಟ್ಟದತುಂಗ, ಕುಡುಕೂರು ಗ್ರಾಮಗಳ ದೇವಾಲಯದ ಸುತ್ತ ಪಲ್ಲಕ್ಕಿ ಉತ್ಸವ ಮೂರ್ತಿಗಳ ಜೊತೆ ಭಕ್ತಾದಿಗಳು ಪಂಜನ್ನು ಹಿಡಿದು ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ. ಈ ದೀವಟಿಗೆ ಉತ್ಸವವನ್ನು ನೋಡಲು ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಜೊತೆಗೆ ಈ ದೇವತಾ ಕಾರ್ಯದಲ್ಲಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರುಗಳು, ವಿವಿಧ ನಿಗಮ ಮಂಡಳಿಗಳವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಿದ್ದಾರೆ.
ತಾಲ್ಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಟ್ಟದ ತಪ್ಪಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ತಾತ್ಕಾಲಿಕ ತುರ್ತು ಚಿಕಿತ್ಸೆ ಘಟಕ ತೆರೆಯಲಿದ್ದಾರೆ. ಪೊಲೀಸ್ ಠಾಣೆ ವತಿ ಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕೈಗೊಳ್ಳಲಾಗಿದ್ದು, ಕುಡಿಯುವ ನೀರು ಕಲ್ಪಿಸಲಿದ್ದಾರೆ.
” ಸ್ಥಳೀಯ ಶಾಸಕರೂ ಆದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ರವರು ಪ್ರವಾಸಿಗರ ಹಾಗೂ ಭಕ್ತಾದಿಗಳ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರದಿಂದ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ೫೦ ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಬೆಟ್ಟದ ಮೇಲೆ ದೇವಾಲಯ ಶಿಥಿಲಗೊಂಡಿದ್ದು, ದುರಸ್ತಿಯಾಗಬೇಕು. ಉಪ್ಪಾರ ಜನಾಂಗದವರು ದೇವರ ಉತ್ಸವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಬೆಟ್ಟದ ಮೇಲೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಸರ್ಕಾರ ಅವುಗಳನ್ನು ಕಲ್ಪಿಸಿಕೊಡಬೇಕು.”
ಕೃಷ್ಣಪ್ರಸಾದ್, ಅರ್ಚಕರು, ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ದೇವಾಲಯ
” ದೀಪಾವಳಿ ಹಬ್ಬದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಕಾರ್ಯಕ್ರಮಗಳನ್ನು ಉಪ್ಪಾರ ಜನಾಂಗವು ತಲೆತಲಾಂತರಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಮಂಗಳವಾರ ಸಂಜೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಬೆಳ್ಳಿ ಬಸಪ್ಪ ಪಲ್ಲಕ್ಕಿ ಉತ್ಸವಮೂರ್ತಿಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೋಗಬೇಕು. ಬುಧವಾರ ಬೆಳಿಗ್ಗೆ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೆಳಗೆ ಇಳಿದು, ೧೬ ಕಿ.ಮೀ. ಬೆಟ್ಟದ ಸುತ್ತಲೂ ಉತ್ಸವ ಮೂರ್ತಿಗಳನ್ನು ತೆಗೆದುಕೊಂಡು ಹೋಗಬೇಕು. ಈ ರೀತಿಯಾಗಿ ಶ್ರಮಿಸುವ ಉಪ್ಪಾರ ಸಮುದಾಯಕ್ಕೆ ಸರ್ಕಾರವು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.”
-ಆಂಜನೇಯ, ಅಧ್ಯಕ್ಷರು, ಶ್ರೀ ಭಗೀರಥ ಉಪ್ಪಾರ ಸಂಘ, ಬೆಟ್ಟದಪುರ





