ಮುಕುಂದ ರಾವಂದೂರು
ಏ.೧೮ರಂದು ರಥೋತ್ಸವ; ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ
ರಾವಂದೂರು: ಗ್ರಾಮ ದೇವತೆ ದೊಡ್ಡಮ್ಮ ತಾಯಿ ರಥೋತ್ಸವ ಶುಕ್ರವಾರ (ಏ.೧೮) ವಿಜೃಂಭಣೆಯಿಂದ ನೆರವೇರಲಿದೆ.
ಪಿರಿಯಾಪಟ್ಟಣ ತಾಲ್ಲೂಕು ರಾವಂದೂರು ಗ್ರಾಮದ ಗ್ರಾಮದೇವತೆ ದೊಡ್ಡಮ್ಮತಾಯಿ ರಥೋತ್ಸವವು ಶುಕ್ರವಾರ ನೆರವೇರಲಿದೆ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಉತ್ಸವಮೂರ್ತಿಯನ್ನು ಬುಧವಾರ ರಾತ್ರಿ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಕಾವೇರಿ ನದಿಯ ದಡಕ್ಕೆ ಕೊಂಡೊಯ್ದು ಗುರುವಾರ ಬೆಳಿಗ್ಗೆಪೂಜೆ ನೆರವೇರಿಸಿ ಅಲ್ಲಿಂದ ಕಾಲ್ನಡಿಗೆ ಮುಖಾಂತರ ವಿವಿಧ ಗ್ರಾಮಗಳ ಮುಖಾಂತರ ಸಾಗಲಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸಲಿದ್ದಾರೆ. ಗುರುವಾರ ರಾತ್ರಿ ದೇವಸ್ಥಾನಕ್ಕೆ ಉತ್ಸವ ಮೂರ್ತಿಯನ್ನು ತಂದು ಇಡಲಾಗುತ್ತದೆ ಶುಕ್ರವಾರ ಬೆಳಿಗ್ಗೆ ಉತ್ಸವಮೂರ್ತಿಯನ್ನು ಎಸ್.ಕೊಪ್ಪಲು ಗ್ರಾಮದ ಮುದ್ದಪ್ಪನವರ ತೋಟಕ್ಕೆ ಕೊಂಡೊಯ್ದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಉತ್ಸವಮೂರ್ತಿಯನ್ನು ಮೆರವಣಿಗೆ ಮುಖಾಂತರ ರಾವಂದೂರು ಗ್ರಾಮಕ್ಕೆ ತಂದು, ನಂತರ ಹೂವಿನಿಂದ ಅಲಂಕೃತ ಗೊಂಡ ರಥದ ಮೇಲೆ ಪ್ರತಿಷ್ಠಾಪಿಸಿ ರಥವನ್ನು ಎಳೆಯಲಿದ್ದಾರೆ.
ಜಾತ್ರಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೊಡ್ಡಮ್ಮತಾಯಿ ಗೆಳೆಯರ ಬಳಗದ ವತಿಯಿಂದ ಅನ್ನಸಂತರ್ಪಣೆ ಯನ್ನು ಏರ್ಪಡಿಸಲಾಗಿದೆ. ಶುಕ್ರವಾರ ಸಂಜೆ ನಂದಿ ಆಗ್ರೋ ಸೆಂಟರ್ ಮಾಲೀಕ ನಂದೀಶ್ ಮತ್ತು ಸ್ನೇಹಿತರು ಸೇರಿ ಮೈಸೂರಿನ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.
ಶುಕ್ರವಾರ ರಾತ್ರಿ ಉತ್ಸವಮೂರ್ತಿಯನ್ನು ಚಂದ್ರಮಂಡಲ ಆಕಾರದ ಮಂಟಪದಲ್ಲಿಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತದನಂತರ ಶನಿವಾರ ಬೆಳಿಗ್ಗೆ ಉತ್ಸವಮೂರ್ತಿಯನ್ನು ಉಯ್ಯಾಲೆ ಆಡಿಸಿ ನಂತರ ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಕೋಮು ಸೌಹಾರ್ದತೆ: ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಏಳು ಕೋಮುಗಳವರು ಪಾಲ್ಗೊಂಡು ಆಚರಿಸಿ ಸೌಹಾರ್ದತೆಯನ್ನು ಮೆರೆಯುವುದು ವಿಶೇಷ.





