Mysore
14
scattered clouds

Social Media

ಸೋಮವಾರ, 05 ಜನವರಿ 2026
Light
Dark

ಕೋಟೆಯಲ್ಲಿ ವರಾಹಿ, ಮಾರಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ಮಂಜು ಕೋಟೆ

ನಾಳೆಯಿಂದ ೩ ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಜಾತ್ರೆ, ಕೊಂಡೋತ್ಸವ 

ಎಚ್.ಡಿ.ಕೋಟೆ: ಪಟ್ಟಣದ ಗ್ರಾಮ ದೇವತೆ ವರಾಹಿ ಮತ್ತು ಮಾರಮ್ಮನವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವವನ್ನು ೯ ವರ್ಷಗಳ ನಂತರ ಜಾತ್ಯತೀತವಾಗಿ ಎಲ್ಲಾ ಸಮುದಾಯದವರು ಸೋಮವಾರದಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಪಟ್ಟಣದ ಮೊದಲನೇ ಮುಖ್ಯರಸ್ತೆಯಲ್ಲಿರುವ ಗ್ರಾಮ ದೇವತೆಯ ಜಾತ್ರೋತ್ಸವ, ಕೊಂಡೋತ್ಸವವನ್ನು ಆಷಾಢ ಮಾಸದಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಣ ಸೇರಿ ತಾಲ್ಲೂಕಿನ ೨೮ ಹಳ್ಳಿಗಳ ಸಾರ್ವಜನಿಕರು ಕೂಡಿ ಈ ಜಾತ್ರೆಯನ್ನು ನಡೆಸುವುದು ವಿಶೇಷ. ಜೂನ್ ೩೦ರಿಂದ ಜುಲೈ ೨ರವರೆಗೆ ಜಾತ್ರಾ ನಿಮಿತ್ತ ವಿವಿಧ ಪೂಜೆಗಳು ನಡೆಯಲಿರುವುದರಿಂದ ಪಟ್ಟಣದ ಮನೆಗಳು, ದೇಗುಲಗಳಿಗೆ ಸುಣ್ಣ ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇವಸ್ಥಾನದಲ್ಲಿ ಕೊಂಡೋತ್ಸವಕ್ಕೆ ಅಗತ್ಯ ಸೌದೆಯನ್ನು ಸಂಗ್ರಹಿಸಲಾಗಿದೆ. ಹಾಲುಮತ ಸಮುದಾಯದವರು ಹೆಬ್ಬಾಳದಲ್ಲಿರುವ ಬೀರಪ್ಪ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ತಂದು ಪಟ್ಟಣದ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಾತ್ರೆಯಲ್ಲಿ ವೀರಮಕ್ಕಳ ಕುಣಿತ ನಡೆಸಿಕೊಡುತ್ತಾರೆ.

ನೈವೇದ್ಯ ತಯಾರಿಕೆಯ ಹೊಣೆಗಾರಿಕೆ: ಪ್ರತಿ ಜಾತ್ರೆಯ ಸಂದರ್ಭದಲ್ಲೂ ಅವಳಿ ಗ್ರಾಮಗಳಾದ ಕಟ್ಟೆಮನುಗನಹಳ್ಳಿ ಮತ್ತು ಅಲ್ತಾಳಹುಂಡಿ ಗ್ರಾಮಸ್ಥರು, ಮೂರು ದಿನಗಳು ನಡೆಯಲಿರುವ ಜಾತ್ರೆಯಲ್ಲಿ ನೈವೇದ್ಯ ಮತ್ತು ಪ್ರಸಾದವನ್ನು ತಯಾರಿಸುವ ಸೇವೆ ಮಾಡಲಿದ್ದಾರೆ.

ಜೂನ್ ೩೦ರಂದು ಆಷಾಢ ಶುದ್ಧ ಪಂಚಮಿಯಂದು ಎಡೆ, ದೂಳು ಪೂಜೆ ಮತ್ತು ಸಂಜೆ ಅರಮನೆ ತಂಪು ಪೂಜೆ ಮಾಡಲಾಗುತ್ತದೆ. ಜುಲೈ೧ರ ಮಂಗಳವಾರ ಆಷಾಢ ಶುದ್ಧ ಪೋಷ್ಠಿಯನ್ನು ತಹಸಿಲ್ದಾರ್ ಶ್ರೀನಿವಾಸ್ ನೆರವೇರಿಸಲಿದ್ದಾರೆ.

ಇದೇ ದಿನ ರಾತ್ರಿ ೯ ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಜು.೨ರ ಬುಧವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ನಡೆಯುವ ಕೊಂಡ ಹಾಯುವ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಜನ ಭಾಗವಹಿಸಲಿದ್ದಾರೆ. ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ದೇವಸ್ಥಾನದ ಮುಖ್ಯಸ್ಥ ಪಟೇಲ್ ನಾಗರಾಜ ಶೆಟ್ಟಿ, -ಣಿಕಾಂತ್, ಪುರಸಭೆ ವ್ಯಾಪ್ತಿಯ ಎಲ್ಲಾ ಜಾತಿಯ ಮುಖಂಡರು ೯ ವರ್ಷಗಳ ನಂತರ ವರಾಹಿ ಮತ್ತು ಮಾರಮ್ಮನ ಜಾತ್ರೋತ್ಸವ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.

” ಮೂರು ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೋತ್ಸವ ನಡೆಯಲಿದ್ದು, ಪಟ್ಟಣಕ್ಕೆ ಬರುವ ಭಕ್ತರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲು ಮತ್ತು ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಪುರಸಭೆಯಿಂದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ ನಡೆಸಲಾಗುವುದು.”

-ಶಿವಮ್ಮ ಚಾಕಹಳ್ಳಿ ಕೃಷ್ಣ, ಅಧ್ಯಕ್ಷರು, ಪುರಸಭೆ

” ೯ ವರ್ಷಗಳ ನಂತರ ವರಾಹಿ ಮತ್ತು ಮಾರಮ್ಮ ದೇವಸ್ಥಾನದ ದೇವರ ಜಾತ್ರಾ ಮಹೋತ್ಸವ ಈ ಬಾರಿ ನಡೆಯುತ್ತಿದೆ. ಇದಕ್ಕಾಗಿ ಎಲ್ಲ ಸಮುದಾಯದವರು, ಶಾಸಕರು, ದೇವಸ್ಥಾನದವರು ಸಕಲ ಸಿದ್ಧತೆಯನ್ನು ನಡೆಸಿದ್ದು, ಈ ಗ್ರಾಮ ದೇವತೆಯ ಹಬ್ಬವನ್ನು ಅರ್ಥಪೂರ್ಣವಾಗಿ ೩ ದಿನಗಳ ಕಾಲ ಆಚರಿಸಲಾಗುತ್ತದೆ.”

-ಪಟೇಲ್ ನಾಗರಾಜ್ ಶೆಟ್ಟಿ, ದೇವಸ್ಥಾನದ ಮುಖ್ಯಸ್ಥರು

Tags:
error: Content is protected !!