ನವೀನ್ ಕುಮಾರ್
ಪಿರಿಯಾಪಟ್ಟಣ: ಪಿಎಂ ಕುಸುಮ್ ಸಿ ಸೌರ ವಿದ್ಯುತ್ ಯೋಜನೆಯಡಿ ವಿದ್ಯುತ್ ಉತ್ಪಾದನೆಯ ಗುರಿ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ನೀಗಿಸಲು ಪಿಎಂ ಕುಸುಮ್-ಸಿ ಸೌರ ವಿದ್ಯುತ್ ಯೋಜನೆಯಡಿ ೬ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್ ) ವತಿಯಿಂದ ತಾಲ್ಲೂಕು ವ್ಯಾಪ್ತಿಯ ೬ ವಿದ್ಯುತ್ ಉಪ ಕೇಂದ್ರಗಳಲ್ಲಿ ಪಿಎಂ ಕುಸುಮ್-ಸಿ ಯೋಜನೆಯಡಿ ಸೌರ ವಿದ್ಯುತ್ ಪೂರೈಕೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
೧೪೭ ಕೋಟಿ ರೂ. ಯೋಜನೆ: ಇತ್ತೀಚೆಗೆ ಮುಖ್ಯಮಂತ್ರಿಗಳು ಪಿರಿಯಾಪಟ್ಟಣಕ್ಕೆ ಆಗಮಿಸಿ ಈ ಯೋಜನೆಗೆ ಚಾಲನೆ ನೀಡಿದ್ದು, ಈಗಾಗಲೇ ತಾಲ್ಲೂಕಿನಲ್ಲಿ ೨೧೬ ಎಕರೆ ಭೂಮಿಯನ್ನು ಗುರುತಿಸಿ ಈ ಯೋಜನೆಗೆ ಮೀಸಲಿರಿ ಸಲಾಗಿದೆ. ಒಟ್ಟು ೧೪೭ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
೪೨ ಮೆಗಾವ್ಯಾಟ್ ಗುರಿ: ಪಿರಿಯಾಪಟ್ಟಣದ ಬೆಟ್ಟದಪುರ ಕೇಂದ್ರಕ್ಕೆ ೭.೩೨೮, ಪಿರಿಯಾಪಟ್ಟಣ ವಿದ್ಯುತ್ ಉಪ ಕೇಂದ್ರಕ್ಕೆ ೧೪.೮೭, ಬೈಲಕುಪ್ಪೆಗೆ ೫.೦೫೭, ರಾವಂದೂರಿಗೆ ೪.೬೭, ಕಣಗಾಲು ವಿದ್ಯುತ್ ಉಪ ಕೇಂದ್ರಕ್ಕೆ ೭.೩೮, ಕಂಪಲಾಪುರ ವಿದ್ಯುತ್ ಉಪ ಕೇಂದ್ರಕ್ಕೆ ೨.೫೪ ಮೆಗಾವ್ಯಾಟ್ ಸೌರ ವಿದ್ಯುತ್ ಪೂರೈಕೆಯಾಗಲಿದೆ. ಒಟ್ಟಾರೆ ೪೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
ಬೇಸಿಗೆಯಲ್ಲಿ ರೈತರಿಗೆ ಅನುಕೂಲ: ತಾಲ್ಲೂಕಿನಲ್ಲೇ ಸೌರ ವಿದ್ಯುತ್ ಉತ್ಪಾದನೆ ಆಗುವುದರಿಂದ ಬೇಸಿಗೆ ಅವಽಯಲ್ಲೂ ರೈತರಿಗೆ ೭ ಗಂಟೆಗಳ ಸಂಪೂರ್ಣ ವಿದ್ಯುತ್ ಪೂರೈಸಲು ಸಹಕಾರಿಯಾಗಲಿದೆ.
೨೫ ಸಾವಿರ ರೂ. ನೆಲಬಾಡಿಗೆ: ಈಗಾಗಲೇ ಗುರುತಿಸಿರುವ ೨೧೬ ಎಕರೆ ಪ್ರದೇಶವನ್ನು ಖಾಸಗಿ ಕಂಪೆನಿಗಳಿಗೆ ನೀಡಲಿದ್ದು, ಪ್ರತಿ ಎಕರೆಗೆ ೨೫,೦೦೦ ರೂ.ವರೆಗೆ ನೆಲಬಾಡಿಗೆ ಪಡೆಯಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರಲಿದೆ.
ಪ್ರಸ್ತುತ ವಿದ್ಯುತ್ ಅನ್ನು ಪ್ರತಿ ಯೂನಿಟ್‌ಗೆ ಸರಾಸರಿ ೭ ರೂ. ನೀಡಿ ಖರೀದಿಸಲಾಗುತ್ತಿದ್ದು, ದೂರದ ಫೀಡರ್‌ಗಳಿಂದ ವಿದ್ಯುತ್ ಖರೀದಿ ಸಲು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಈ ಯೋಜನೆ ಸಂಪೂರ್ಣ ಜಾರಿಯಾದರೆ ಸರಾಸರಿ ೩.೫ ರೂ.ಗಳಿಗೆ ೧ ಯೂನಿಟ್ ವಿದ್ಯುತ್ ಖರೀದಿ ಮಾಡಬಹುದಾಗಿದೆ. ಈ ಕುರಿತು ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತಿದೆ.
ಸಚಿವ ಕೆ.ವೆಂಕಟೇಶ್ ಅವರು ಈಗಾಗಲೇ ಕುಸುಮ್ ಸಿ ಯೋಜನೆ ಅನುಷ್ಠಾನ ಸಂಬಂಧ ಹಿರಿಯ ಅDiಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕಾರ್ಯಗತಗೊಳಿಸುತ್ತಿದ್ದಾರೆ. ಒಟ್ಟಾರೆ ಯೋಜನೆ ಜಾರಿಯಾದರೆ ತಾಲ್ಲೂಕಿನಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.
” ಸಚಿವರ ಆದೇಶದಂತೆ ಕುಸುಮ್ ಸಿ ಯೋಜನೆ ಜಾರಿಗೆ ಅಗತ್ಯವಾದ ೨೧೬ ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಿ ಸೆಸ್ಕ್‌ಗೆ ನೀಡಲಾಗಿದೆ.”
-ನಿಸರ್ಗ ಪ್ರಿಯಾ, ತಹಸಿಲ್ದಾರ್.
” ಈಗಾಗಲೇ ಬಹುತೇಕ ಜಾಗ ನೀಡಲಾಗಿದ್ದು, ಹೆಚ್ಚಿನ ಜಾಗ ದೊರಕದಿರುವ ಫೀಡರ್ ಪ್ರದೇಶಗಳಲ್ಲಿ ರೈತರ ಜಮೀನುಗಳನ್ನು ಲೀಸ್‌ಗೆ ಪಡೆದು ವಿದ್ಯುತ್ ಉತ್ಪಾದನೆಗೆ ಮುಂದಾಗಲಾಗುವುದು. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ.”
-ಗುರುಬಸವರಾಜು, ಎಇಇ, ಸೆಸ್ಕ್





