ಸಾಲೋಮನ್
ನಾಲ್ವರು ಸಂಶೋಧಕರಿಂದ ಕೆಲಸ ಆರಂಭ
ಮೈಸೂರು: ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜರಿಗೆ ಒಂದು ಇತಿಹಾಸವಿದೆ. ಅದೇ ವಂಶದ ರಾಜರೊಬ್ಬರು ಸ್ಥಾಪಿಸಿದ ನಗರದ ಪ್ರತಿಷ್ಠಿತ ಮಹಾರಾಜ ಕಾಲೇಜಿಗೂ ಒಂದು ಇತಿಹಾಸವಿದೆ. ಅದರ ಪರಿಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ಅದಕ್ಕೆ ಗ್ರಂಥ ರೂಪ ನೀಡುವ ಕಾರ್ಯ ಸಾಗಿದೆ.
ಶತಮಾನಗಳಿಂದ ಮಿಲಿಯಾಂತರರಿಗೆ ಜ್ಞಾನದ ಬುತ್ತಿ ಉಣಿಸಿದ ವಿದ್ಯಾಶಿಖರ ಮೈಸೂರಿನ ಐತಿಹಾಸಿಕ ಮಹಾರಾಜ ಕಾಲೇಜು ಹುಟ್ಟಿ ಬೆಳೆದು ಬಂದ ರೀತಿ, ಅಲ್ಲಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಾಧನೆ ಮುಂತಾದ ನೂರಾರು ವಿಷಯಗಳ ಬಗ್ಗೆ ನೂರು ವರ್ಷಗಳ ಇತಿಹಾಸದ ಎಳೆ ಎಳೆಯಾಗಿ ಮಾಹಿತಿಯನ್ನೊಳಗೊಂಡ ಗ್ರಂಥ ರಚನೆಗೆ ಅಗತ್ಯ ದಾಖಲೆ ಸಂಗ್ರಹಣೆ ನಡೆದಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು, ಬಿಎಂಶ್ರೀ ಮುಂತಾದ ಮೇಧಾವಿಗಳು ಇದೇ ಕಾಲೇಜಿನಲ್ಲಿ ಕಲಿತಿದ್ದರು ಮತ್ತು ಪಾಠ ಬೋಽಸಿದ್ದರು ಎಂಬ ಹೆಮ್ಮೆಯ ನೆನಪುಗಳನ್ನು ಮುಂದಿನ ತಲೆಮಾರುಗಳಿಗೂ ಕಾಪಿಡುವ ಯತ್ನ ಇದೆನ್ನಬಹುದು.
ಈಗಿನ ಪೀಳಿಗೆಯವರೆಲ್ಲರಿಗೂ ಬಹುತೇಕ ಮಹಾರಾಜ ಕಾಲೇಜಿನ ಇತಿಹಾಸ ಗೊತ್ತಿರುವುದಿಲ್ಲ. ಕಾಲೇಜಿನ ಬಗ್ಗೆ ಅಲ್ಲೊಂದು – ಇಲ್ಲೊಂದು ವಿಚಾರ ಕೇಳಿರುವುದು, ಓದಿರುವುದು ಬಿಟ್ಟರೆ ಮಹಾರಾಜ ಕಾಲೇಜು ಸ್ಥಾಪನೆ ಯಾದ ಬಗ್ಗೆ ಹಾಗೂ ಅದು ಬೆಳೆದು ಬಂದ ಹಾದಿಯನ್ನು ಕುರಿತು ವಿವರವಾಗಿ ಸಾಕಷ್ಟು ಜನರಿಗೆ ತಿಳಿದಿಲ್ಲ. ಈಗ ಅದನ್ನು ದಾಖಲಿಸದೆ ಹೋದರೆ ಮುಂದಿನ ದಿನಗಳಲ್ಲಿ ದಾಖಲೆಗಳು ಇನ್ನಷ್ಟು ಜೀರ್ಣವಾಗಿ ಮಾಹಿತಿಗಳು ಸಿಗದೆ ಹೋಗಬಹುದು ಎನ್ನುವ ಕಾರಣದಿಂದ ಖಾಸಗಿ ಸಂಸ್ಥೆಯೊಂದರೊಂದಿಗೆ ಮೈಸೂರು ವಿವಿಯು ಒಡಂಬಡಿಕೆ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ರಾದ ಡಾ.ಪವಮಾನ(ಇತಿಹಾಸ), ಡಾ.ಗ್ಯಾವಿನ್ ಜೂಡ್ ವಿಲ್ಸನ್(ಇಂಗ್ಲಿಷ್), ಡಾ.ರೋಹಿತ್ ಈಶ್ವರ್ (ಪುರಾತತ್ವ ಶಾಸ) ಮತ್ತು ಇತಿಹಾಸಕಾರರಾದ ಡಾ.ನರೇಂದ್ರ ಪ್ರಸಾದ್ – ಈ ನಾಲ್ವರು ಮಾಹಿತಿ, ದಾಖಲೆ ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ.
ದಿ ಮಿಥಿಕ್ ಸೊಸೈಟಿ ಜೊತೆ ಮೈ ವಿವಿ ಒಡಂಬಡಿಕೆ: ಮೈಸೂರು ವಿಶ್ವವಿದ್ಯಾನಿಲಯ ಇಂಥದ್ದೊಂದು ವಿಶೇಷ ಕ್ರಿಯೆಯಲ್ಲಿ ತೊಡಗಿದಾಗ ಕೈ ಜೋಡಿಸುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆ ಕಾರ್ಯಕ್ಕೆ ಯಾವುದೇ ಅಡ್ಡಿ ಆಗದಂತೆ ಸಂಸ್ಥೆಯೊಂದರ ಜೊತೆ ಕೆಲಸ ಮಾಡಲು ಮುಂದಾಗಿದ್ದು, ಹಿಡಿದ ಕೆಲಸವನ್ನು ಅಂದುಕೊಂಡ ಹಾಗೆ ಪೂರ್ಣಗೊಳಿಸುವತ್ತ ಗಮನ ಹರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಶೋಧನೆಯ ಗ್ರಂಥ ಮಾಲಿಕೆಯನ್ನು ಮುದ್ರಣ ರೂಪದಲ್ಲಿ ಪ್ರಕಟಿಸಲು ಹಾಗೂ ಡಿಜಿಟಲ್ ರೂಪದಲ್ಲೂ ಸಿದ್ಧಪಡಿಸಲು ಮೈಸೂರು ವಿಶ್ವವಿದ್ಯಾನಿಲಯವು ದಿ ಮಿಥಿಕ್ ಸೊಸೈಟಿ ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ.
ಏನೆಲ್ಲ ಇರುತ್ತದೆ? ಎಲ್ಲಿಂದ ಆರಂಭ?: ಹಿಂದೆ ಮೈಸೂರು ಸಂಸ್ಥಾನದಲ್ಲಿದ್ದ ಬ್ರಿಟಿಷರು ಮೈಸೂರು ನಗರದಲ್ಲಿ ‘ಇಂಗ್ಲೀಷ್ ಶಾಲೆ’ಗಳನ್ನು ಆರಂಭಿಸಿದ್ದರು. ಆನಂತರ ೧೮೩೩ರಲ್ಲಿ ಅಂದಿನ ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರ್ ‘ರಾಜಾಸ್ ಫ್ರೀ ಸ್ಕೂಲ್’ ಆರಂಭ ಮಾಡಿ ಶಾಲೆಗಳನ್ನು ನಡೆಸುತ್ತಿದ್ದರು. ನಂತರ ೧೮೭೯ರಲ್ಲಿ ಹತ್ತನೇ ಮಹಾರಾಜ ಚಾಮರಾಜ ಒಡೆಯರ್ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಮಾಡಿದರು. ಮಹಾರಾಜ ಪದವಿ ಕಾಲೇಜು ಆರಂಭಕ್ಕೆ ಹಿಂದಿನಿಂದ ಹಿಡಿದು ನೂರು ವರ್ಷಗಳವರೆಗಿನ ಇತಿಹಾಸ ಇರುತ್ತದೆ. ಈ ಮಾಹಿತಿ ಗ್ರಂಥಗಳನ್ನು ಮೂರು ಸಂಪುಟ (ವಾಲ್ಯೂಮ್) ಗಳಲ್ಲಿ ಹೊರತರುವುದೆಂದು ನಿರ್ಧರಿಸಲಾಗಿದೆ.
ದಾಖಲೆ ಎಲ್ಲೆಲ್ಲಿದೆ?
ಮೈಸೂರು ಸಂಸ್ಥಾನದ ಅಂದಿನ ಶಾಲಾ ಕಾಲೇಜುಗಳು ಮದ್ರಾಸ್ ವಿಶ್ವವಿದ್ಯಾನಿಲಯದ ಅಡಿಯಲ್ಲಿದ್ದರಿಂದ, ಅಲ್ಲಿಂದಲೂ ದಾಖಲೆಗಳನ್ನು ಸಂಗ್ರಹಿಸುವುದು ಸೇರಿ, ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಸೊಸೈಟಿ, ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಸೊಸೈಟಿ, ಬೆಂಗಳೂರು ಆರ್ಚೀವ್ಸ್, ದಿ ಮಿಥಿಕ್ ಸೊಸೈಟಿ, ಮೈಸೂರಿನ ಪತ್ರಾಗಾರ ಇಲಾಖೆ ಹಾಗೂ ಅರಮನೆಯ ಪತ್ರಾಗಾರ ಸಂಗ್ರಹಾಲಯಗಳಲ್ಲಿ ದಾಖಲೆಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಇವೆಲ್ಲವುಗಳನ್ನು ಇಟ್ಟುಕೊಂಡು ಮೂರು ಸಂಪುಟಗಳ ‘ಐತಿಹಾಸಿಕ ಮಹಾರಾಜ ಕಾಲೇಜು ಮಾಹಿತಿ ಗ್ರಂಥ’ ರಚನೆಗೊಳ್ಳುತ್ತಿದೆ. ದಿ ಮಿಥಿಕ್ ಸೊಸೈಟಿಯ ಪರವಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎಸ್.ರವಿ ಮೈಸೂರು ವಿಶ್ವವಿದ್ಯಾನಿಲಯದ ಒಡಂಬಡಿಕೆಗೆ ಸಹಿ ಹಾಕಿದರು.
೨-೩ ವರ್ಷಗಳು ಕಾಲಾವಕಾಶ
” ಮಹಾರಾಜ ಕಾಲೇಜಿನ ಬಗ್ಗೆ ವಿಶ್ವವಿದ್ಯಾನಿಲಯದ ಅನೇಕ ಪ್ರಾಧ್ಯಾಪಕರಿಗೆ ಪರಿಪೂರ್ಣ ಇತಿಹಾಸ ತಿಳಿದಿಲ್ಲ. ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ‘ಮಾಹಿತಿ ಗ್ರಂಥ’ಗಳನ್ನು ರಚಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇದು ಮೂರು ಸಂಪುಟಗಳಷ್ಟು ಆಗಬಹು ದೆಂದು ಅಂದಾಜಿಸಲಾಗಿದೆ. ಇದಕ್ಕೆ ೨ರಿಂದ ೩ ವರ್ಷ ಗಳ ಕಾಲಾವಕಾಶ ಪಡೆದುಕೊಂಡಿದ್ದೇವೆ. ಮೊದಲು ಕನ್ನಡದಲ್ಲಿ ಈ ಮಾಹಿತಿ ಗ್ರಂಥ ಮಾಲಿಕೆ ಸಿದ್ಧವಾಗಲಿದೆ.”
-ರೋಹಿತ್ ಈಶ್ವರ್, ಪ್ರಾಧ್ಯಾಪಕರು, ಮಹಾರಾಜ ಕಾಲೇಜು, ಮೈಸೂರು
” ಮಹಾರಾಜ ಕಾಲೇಜು ಶತಮಾನಗಳನ್ನು ದಾಟಿದೆ. ಆದರೆ ಇದು ನಡೆದು ಬಂದ ಹಾದಿ ಬಗ್ಗೆ ದಾಖಲೆಗಳಿಲ್ಲ. ಇದನ್ನು ಸಿದ್ಧಪಡಿಸಲು ನಮ್ಮ ವಿಶ್ವವಿದ್ಯಾನಿಲಯದ ಮೂರು ಮಂದಿ ಪ್ರಾಧ್ಯಾಪಕರು ಹಾಗೂ ಒಬ್ಬ ನಿವೃತ್ತ ಪ್ರಾಧ್ಯಾಪಕರು ಕೈ ಜೋಡಿಸಿದ್ದಾರೆ. ಮುದ್ರಣ ಮಾಡಲು ದಿ ಮಿಥಿಕ್ ಸೊಸೈಟಿ ಮುಂದೆ ಬಂದಿದ್ದು, ೩೦ ಲಕ್ಷ ರೂ. ಅನುದಾನ ನೀಡುತ್ತಿದೆ. ಮುದ್ರಣ ಹಾಗೂ ಡಿಜಿಟಲ್ ರೂಪದಲ್ಲಿ ಈ ಗ್ರಂಥ ಮಾಲಿಕೆ ಹೊರಬರಲಿದೆ.”
-ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿವಿ.
ಮೇಧಾವಿಗಳ ಪರಿಚಯ:
ಕಾಲೇಜಿನ ಮೊದಲ ಪ್ರಾಂಶುಪಾಲರಾದ ಜೆ.ಸಿ.ರೆಲ್ಲೋ, ಆಲ್ಬರ್ಟ್ ಮ್ಯಾಕಿಂತೋಷ್ ಅವರಿಂದ ಹಿಡಿದು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಲೇಜಿನ ಎಲ್ಲಾ ಭಾರತೀಯ ಪ್ರಾಧ್ಯಾಪಕರು ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳು, ಕಾಲೇಜಿನ ಐತಿಹಾಸಿಕ ಘಟನೆಗಳು, ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿ ದಾಖಲೆಗಳನ್ನು ಸಂಗ್ರಹಿಸಿ ಗ್ರಂಥವನ್ನು ರಚಿಸಲಾಗುತ್ತಿದೆ.