ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಶೇ.೧೦ರಷ್ಟು ಬಿತ್ತನೆ ಕಾರ್ಯವೂ ನಡೆದಿಲ್ಲ
ದೂರ ನಂಜುಂಡಸ್ವಾಮಿ
ದೂರ: ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ಪೂರ್ವ ಮುಂಗಾರು ತಡವಾಗುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.
ಹೋಬಳಿ ವ್ಯಾಪ್ತಿಯಲ್ಲಿ ದೂರ, ದೊಡ್ಡಕಾಟೂರು, ಟಿ.ಕಾಟೂರು, ಮಾರ್ಬಳ್ಳಿ ಹುಂಡಿ, ಮಾರ್ಬಳ್ಳಿ, ಅರಸಿನಕೆರೆ, ಹಾರೋಹಳ್ಳಿ, ಗುಜ್ಜೇಗೌಡನಪುರ, ಮಂಡನಹಳ್ಳಿ ಸೇರಿದಂತೆ ಒಟ್ಟು ೪೫ ಗ್ರಾಮಗಳಿದ್ದು, ಬಹುತೇಕ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ.
ಕಳೆದ ವರ್ಷ ಉತ್ತಮವಾಗಿ ಮಳೆ ಬಿದ್ದರೂ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯಲಿಲ್ಲ. ಕಳೆದ ಐದಾರು ವರ್ಷಗಳಿಂದ ರೈತರಿಗೆ ಬಿತ್ತನೆಗೆಂದು ಮಾಡಿದ ಖರ್ಚು ಸಹ ಅವರಿಗೆ ದೊರಕುತ್ತಿಲ್ಲ.
ಮಾರ್ಚ್ ತಿಂಗಳಲ್ಲಿ ಮಳೆಯು ಒಂದು ಬಾರಿ ಮಾತ್ರ ಬಿದ್ದಿದ್ದರಿಂದ ರೈತರು ಭೂಮಿಯನ್ನು ಹದ ಮಾಡಿಟ್ಟುಕೊಂಡಿದ್ದರು. ವರ್ಷದ ಮೊದಲ ಮಳೆಯಾದ ರೇವತಿ ಮಳೆಯಾದಾಗ ಬಿತ್ತನೆ ಮಾಡಿದಲ್ಲಿ ಉತ್ತಮ ಇಳುವರಿ ಬರುತ್ತದೆ ಎಂಬ ನಂಬಿಕೆಯಲ್ಲಿದ್ದರು.
ಆದರೆ ರೇವತಿ ಮಳೆಯೂ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಅಶ್ವಿನಿ ಮಳೆ ಕಳೆದರೂ ಮಳೆ ಬೀಳುವ ಸಾಧ್ಯತೆ ಕಾಣುತ್ತಿಲ್ಲ. ಇದರಿಂದ ಶೇ.೧೦ರಷ್ಟು ಬಿತ್ತನೆ ಕಾರ್ಯವೂ ನಡೆದಿಲ್ಲ. ಈ ಬಾರಿ ಜಯಪುರ ರೈತ ಸಂಪರ್ಕ ಕೇಂದ್ರದಲ್ಲಿ ಹತ್ತಿ, ಅಲಸಂದೆ, ಉದ್ದು, ಹೆಸರು ಬಿತ್ತನೆ ಬೀಜಗಳು ರಿಯಾಯಿತಿ ದರದಲ್ಲಿ ಮಾರಾಟವಾಗಿವೆ. ಇದಲ್ಲದೆ ಬೇರೆ ಕಡೆಗಳಿಂದಲೂ ಬಿತ್ತನೆ ಬೀಜಗಳನ್ನು ಖರೀದಿಸಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ.
” ಪೂರ್ವ ಮುಂಗಾರು ಪ್ರಾರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಮಳೆ ಬಾರದೆ ಇರುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ರೈತರು ಭೀತಿಗೊಂಡಿದ್ದಾರೆ. ಬಿತ್ತನೆ ಮಾಡಿರುವ ಅಲ್ಪಸ್ವಲ್ಪ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ.”
– ಡಿ.ಬಿ.ಶಿವಣ್ಣ, ರೈತ, ದೂರ ಗ್ರಾಮ.
” ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ೨೦೨೩-೨೪ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಈ ವರ್ಷ ಪೂರ್ವ ಮುಂಗಾರು ಕಡಿಮೆಯಾದರೂ ಮುಂಗಾರಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರಲಿದೆ. ಆದ್ದರಿಂದ ರೈತರು ಭಯ ಪಡುವ ಅಗತ್ಯವಿಲ್ಲ. ಮೈಸೂರು ಭಾಗದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಉತ್ತಮ ಮಳೆಯಾಗಲಿದೆ. ಜುಲೈ ತಿಂಗಳಲ್ಲಿ ಸ್ವಲ್ಪ ಕಡಿಮೆ ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಳೆಯಾಗಲಿದೆ.”
-ಡಾ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ನಾಗನಹಳ್ಳಿ




