ನವೀನ್ ಡಿಸೋಜ
‘ಗುರಿಯೊಂದಿಗೆ ಶ್ರಮವಹಿಸಿದರೆ ಯಶಸ್ಸು ಸಾಧ್ಯ’ ಆಂದೋಲನ ಸಂದರ್ಶನದಲ್ಲಿ ಚಂದೂರ ಪೂವಣ್ಣ ಅಭಿಮತ
ಮಡಿಕೇರಿ: ಭಾರತ ಹಿರಿಯರ ಹಾಕಿ ತಂಡಕ್ಕೆ ಕೊಡಗಿನ ಆಟಗಾರ ಚಂದೂರ ಬಿ.ಪೂವಣ್ಣ ಆಯ್ಕೆಗೊಂಡಿದ್ದಾರೆ.
ಚಂದೂರ ಪೂವಣ್ಣ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕರ್ನಾಟಕ ರಾಜ್ಯದಿಂದ ಪೂವಣ್ಣ ಮಾತ್ರ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಪೂವಣ್ಣ ಯೂರೋಪ್ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು.ಜೂನಿಯರ್ ಇಂಡಿಯಾ ತಂಡವನ್ನು ಈ ಹಿಂದೆ ಪ್ರತಿನಿಧಿಸಿದ್ದರು. ಭಾರತ ತಂಡ ಆ.೭ ರಂದು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ.
‘ಗುರಿಯೊಂದಿಗೆ ಶ್ರಮವಹಿಸಿದರೆ ಯಶಸ್ಸು ಸಾಧ್ಯ’ ಯಾವುದೇ ಕ್ಷೇತ್ರದಲ್ಲಿ ಕಷ್ಟ, ಏಳು- ಬೀಳು ಇದ್ದೇ ಇರುತ್ತದೆ. ಯಾವುದೂ ಕೂಡ ಸುಲಭದಲ್ಲಿ ದೊರಕುವುದಿಲ್ಲ. ಗುರಿಯೊಂದಿಗೆ ಶ್ರಮವಹಿಸಿದರೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಪಿ.ಪೂವಣ್ಣ ಹೇಳಿದ್ದಾರೆ. ‘ಆಂದೋಲನ’ ನಡೆಸಿದ ಸಂದರ್ಶನದಲ್ಲಿ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಆಂದೋಲನ: ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ನಿಮ್ಮ ಪಯಣ ಹೇಗಿತ್ತು?
ಪೂವಣ್ಣ: ನಾನು ೫ನೇ ತರಗತಿಯಿಂದ ಹಾಕಿ ಆಡುತ್ತಿದ್ದೇನೆ. ೮ನೇ ತರಗತಿಗೆ ಕಾಲ್ಸ್ ಸಂಸ್ಥೆಗೆ ಸೇರಿ ಅಲ್ಲಿ ಹಾಕಿ ಆಡುತ್ತಿದ್ದೆ. ಎಸ್‌ಎಸ್‌ಎಲ್‌ಸಿವರೆಗೆ ಅಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಪಿಯುಸಿಗೆ ಬೆಂಗಳೂರಿನ ಶಾಂತಿನಗರದ ಸಾಯಿ ವಿದ್ಯಾ ಸಂಸ್ಥೆಗೆ ಸೇರಿ ಪ್ರಾಕ್ಟಿಸ್ ಮಾಡುತ್ತಿದ್ದೆ. ಬಳಿಕ ಜೂನಿಯರ್ ಕ್ಯಾಂಪ್ ಅಟೆಂಡ್ ಮಾಡಿದ್ದೆ. ಆದರೆ, ಸೆಲೆಕ್ಟ್ ಆಗಿರಲಿಲ್ಲ. ಕೋವಿಡ್ ನಂತರದಲ್ಲಿ ನ್ಯಾಷನಲ್ ಕರ್ನಾಟಕ ಹಾಕಿ ಜೂನಿಯರ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದೆ. ಬಳಿಕ ಕ್ಯಾಂಪ್ ಸಿಕ್ಕಿತ್ತು. ನಂತರದಲ್ಲಿ ಬಹಳ ಟೂರ್ನಿಮೆಂಟ್ ಆಡಿದ್ದೆವು. ಹಾಸನದ ಮೋಹಿತ್ ಕೂಡ ನನ್ನ ಜೊತೆಗಿದ್ದ. ೨೦೨೨ರಲ್ಲಿ ಸುಲ್ತಾನ್ ಆಫ್ ಜೋಹರ ಕಫ್ ಆಡಿದ್ದೆ. ನಂತರ ಬೋಪಲ್ ಎಂಸಿಯಲ್ಲಿ ಪಾಲ್ಗೊಂಡಿದ್ದೆ. ನಂತರ ಏಷಿಯನ್ಸ್ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದೆ. ಬಳಿಕ ಕೆಲವು ಕ್ಯಾಂಪ್‌ನಲ್ಲಿ ಪಾಲ್ಗೊಂಡು ಇದೀಗ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದೇನೆ. ಇದೇ ೭ರಂದು ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದೇವೆ. ಮುಖ್ಯವಾಗಿ ಕೊಡಗಿನ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದನ್ನು ಮರೆಯಲಾಗುವುದಿಲ್ಲ.
ಆಂದೋಲನ: ಕೊಡಗಿನಿಂದ ಹಲವು ವರ್ಷಗಳ ಬಳಿಕ ನೀವು ಆಯ್ಕೆಯಾಗಿರುವ ಬಗ್ಗೆ ಏನು ಹೇಳುವಿರಿ?
ಪೂವಣ್ಣ: ಕೊಡಗಿನಲ್ಲಿ ಬಹಳಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ. ಕರ್ನಾಟಕದಲ್ಲೂ ಒಳ್ಳೆಯ ಆಟಗಾರರಿದ್ದಾರೆ. ಅವರಲ್ಲಿ ನಾನು ಆಯ್ಕೆಯಾಗಿರುವುದಕ್ಕೆ ನಿಜಕ್ಕೂ ಖುಷಿ ಯಾಗುತ್ತಿದೆ. ಹೆಚ್ಚಿನ ಶ್ರಮ ವಹಿಸಿದರೆ ನನ್ನಂತೆಯೇ ಇನ್ನಷ್ಟು ಆಟಗಾರರು ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳ ಬಹುದಾಗಿದೆ. ಆಟಗಾರರಿಗೆ ಪ್ರೋತ್ಸಾಹ, ಸೂಕ್ತ ತರಬೇತಿಯ ಅವಶ್ಯ ಇದೆ. ಇನ್ನೂ ಉತ್ತಮ ಆಟಗಾರರು ಇರುವುದರಿಂದ ಮುಂದೆ ಇನ್ನಷ್ಟು ಆಟಗಾರರು ಬರುವ ಸಾಧ್ಯತೆ ಇದೆ.
ಆಂದೋಲನ: ನಿಮ್ಮ ಹಾಕಿ ಪಯಣದಲ್ಲಿ ಸಹಕರಿಸಿದ ನಿಮ್ಮ ಕೋಚ್ಗಳ ಬಗ್ಗೆ ಮಾಹಿತಿ ನೀಡಬಹುದೆ?
ಪೂವಣ್ಣ: ನನ್ನ ಈ ಸಾಧನೆಯ ಹಿಂದೆ ಸಾಕಷ್ಟು ಮಂದಿ ತರಬೇತಿ ನೀಡಿದವರ ಶ್ರಮ ಖಂಡಿತಾ ಇದೆ. ೭ನೇ ತರಗತಿವರೆಗೆ ನನಗೆ ಸಂತ ಅನ್ನಮ್ಮ ಶಾಲೆಯಲ್ಲಿ ಪ್ರಸನ್ನ ಎಂಬವರು ತರಬೇತಿ ನೀಡಿದ್ದರು. ಅವರಿಂದಲೇ ನಾನು ಹಾಕಿ ಆರಂಭಿಸಿದ್ದು. ಬಳಿಕ ಕಾಲ್ಸ್‌ನಲ್ಲಿ ಚೇತನ್ ಸರ್ ತುಂಬಾ ಸಹಾಯ ಮಾಡಿದರು. ಸಾಯಿ ಸಂಸ್ಥೆಯಲ್ಲಿ ಅಶ್ವತ್ ಸರ್ ತರಬೇತಿ ನೀಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಇದ್ದಾರೆ. ಇವರೆಲ್ಲರ ಮಾರ್ಗದರ್ಶನದಿಂದಲೇ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಬೇಸರದ ವಿಚಾರದವೆಂದರೆ, ಅಶ್ವತ್ ಸರ್ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ.
ಆಂದೋಲನ: ಯುವಕರು ಹಾಕಿಯಲ್ಲಿ ಸಾಧನೆ ಮಾಡಬೇಕೆಂದಿದ್ದಾರೆ. ಅವರಿಗೆ ನಿಮ್ಮ ಕಿವಿಮಾತು?
ಪೂವಣ್ಣ: ಹಾಕಿಯಲ್ಲಿ ಮುಖ್ಯವಾಗಿ ಬೇಸಿಕ್ಸ್ ಸ್ಟ್ರಾಂಗ್ ಇರಬೇಕು. ಹಾಗಾಗಿ ಬೇಸಿಕ್ಸ್ ಬಗ್ಗೆ ಮೊದಲು ಹೆಚ್ಚಿನ ಗಮನಹರಿಸಬೇಕು. ನಂತರದಲ್ಲಿ ಗುರಿ ಹೊಂದಿರಬೇಕು. ಜೀವನದಲ್ಲಿ ಛಲ ಇರಬೇಕು. ದೈಹಿಕ ದೃಢತೆ ಜೊತೆಗೆ ಮಾನಸಿಕ ದೃಢತೆಯೂ ಮುಖ್ಯ. ನಾನು ಕೋವಿಡ್ ವೇಳೆ ಮನೆಯಲ್ಲಿದ್ದಾಗ ಬೆಳಿಗ್ಗೆ ಎದ್ದು ಸುಮಾರು ೫ ಕಿಮೀ ವರೆಗೂ ಓಡುತ್ತಿದ್ದೆ. ಹಾರ್ಡ್ ವರ್ಕ್ ಯಾವಾಗಲೂ ನಮಗೆ ಯಶಸ್ಸು ತರುತ್ತದೆ. ಜೀವನದಲ್ಲಿ ಯಾವುದೂ ಸುಲಭವಲ್ಲ. ನೀವು ಶ್ರಮವಹಿಸಿದರೆ ನಿಮಗೆ ಪ್ರತಿಫಲ ದೊರಕುತ್ತದೆ.
ಪರಿಚಯ: ಚಂದೂರ ಪಿ.ಪೂವಣ್ಣ ಕೊಡಗು ಜಿಲ್ಲೆಯ ರುದ್ರಗುಪ್ಪೆ ಸಮೀಪದ ಕಂಡಂಗಾಲ ಗ್ರಾಮದವರು. ಚಂದೂರ ಎಸ್.ಪ್ರಭು , ಅನಿಲ ದಂಪತಿ ಪುತ್ರ. ಓರ್ವ ಸಹೋದರ ಪೊನ್ನಣ್ಣ. ವಿರಾಜಪೇಟೆ ಸಂತ ಅನ್ನಮ್ಮ ಶಾಲೆ, ಗೋಣಿಕೊಪ್ಪದ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ. ನಂತರ ಬೆಂಗಳೂರಿನ ಸಾಯಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ.





