Mysore
25
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ

೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ

ಪ್ರವಾಸಿಗರು, ವಲಸೆ ಕಾರ್ಮಿಕರ ಮಕ್ಕಳಿಗೂ ಲಸಿಕೆ ಹಾಕಲು ಕ್ರಮ 

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಭಾನುವಾರ ನಡೆಯಲಿರುವ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು ೩೨,೭೦೨ ಮಕ್ಕಳನ್ನು ಗುರುತಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ೩,೨೭೫, ಗ್ರಾಮೀಣ ವ್ಯಾಪ್ತಿಯಲ್ಲಿ ೨೯,೪೨೭ ಮಕ್ಕಳನ್ನು ಗುರುತಿಸಲಾಗಿದ್ದು, ಇವರಲ್ಲಿ ಒಟ್ಟು ೧೫,೭೮೮ ಸ್ಥಿರವಾಸಿತ ಮಕ್ಕಳು, ವಲಸೆ ಕಾರ್ಮಿಕರ ೪,೧೧೨ ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ೪೭೦ ಬೂತ್‌ಗಳು, ೩೨ ಸಂಚಾರಿ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೂತ್‌ಗಳಲ್ಲಿ ಲಸಿಕೆ ನೀಡಲು ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು, ೯೭೩ ಮನೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ೧,೩೬,೨೧೪ ಮನೆಗಳನ್ನು ಗುರುತಿಸಲಾಗಿದೆ. ಈ ಮನೆಗಳಿಗೆ ಭೇಟಿ ನೀಡಿ ಬಿಟ್ಟು ಹೋಗಿರುವ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ತಮ್ಮ ಸಮೀಪದ ಮನೆಯಲ್ಲಿ ೦೩ ತಿಂಗಳಿಂದ ೦೬ ವರ್ಷಗಳ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಶಾಲಾ ಮಕ್ಕಳಿಗೆ ತಿಳಿಸಲಾಗಿದೆ. ಅಲ್ಲದೆ, ಮಕ್ಕಳ ಮೂಲಕ ನಗರ ಪ್ರದೇಶದಲ್ಲಿ ಅರಿವು ಜಾಥಾ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಬೂತ್ ಮಾಡಿರುವ ಶಾಲೆಯನ್ನು ಬೆಳಿಗ್ಗೆ ೮ ಗಂಟೆಗೆ ತೆರೆದು ಲಸಿಕೆ ನೀಡಲು ಸೂಚನೆ ನೀಡಲಾಗಿದೆ. ಗ್ರಾ.ಪಂ. ಮಟ್ಟದಲ್ಲಿ ಕಸ ಸಂಗ್ರಹಿಸುವ ವಾಹನದ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಯಲ್ಲಿರುವ ಮಕ್ಕಳು, ಎಲ್‌ಕೆಜಿ ಹಾಗೂ ಯುಕೆಜಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಭಾನುವಾರ ರಜಾದಿನ ಇರುವುದರಿಂದ ಹೋಂಸ್ಟೇ, ಹೋಟೆಲ್, ರೆಸಾರ್ಟ್ ಗಳಿಗೆ ಬರುವ ಪ್ರವಾಸಿಗರ ಜೊತೆ ೩ ತಿಂಗಳಿಂದ ೦೫ ವರ್ಷದ ಒಳಗಿನ ಮಕ್ಕಳು ಕಂಡುಬಂದಲ್ಲಿ ಲಸಿಕೆ ಹಾಕಿಸಲು ಸೂಚಿಸಲಾಗಿದೆ.

ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು, ಇಟ್ಟಿಗೆಗೂಡು ಕಾರ್ಮಿಕರು, ಕಟ್ಟಡ ಕಾರ್ಮಿಕರು, ರಸ್ತೆ ಡಾಂಬರೀಕರಣ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲು ಮುತುವರ್ಜಿ ವಹಿಸಲಾಗಿದೆ. ಪೋಲಿಯೋ ಲಸಿಕೆ ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ ೮ ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪದವಿ ಕಾಲೇಜಿನ ಬಳಿ ಇರುವ ಅಂಗನವಾಡಿ ಕೇಂದ್ರ (ಗಾಳಿಬೀಡು ರಸ್ತೆ)ದಲ್ಲಿ ಗಣ್ಯರು ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ.

ಅಗತ್ಯವಿರುವೆಡೆ ಸಂಚಾರಿ ಬೂತ್..!:  ಪ್ರವಾಸಿ ಸ್ಥಳಗಳಲ್ಲಿ ಮತ್ತು ಜಿಲ್ಲೆಗೆ ಪ್ರವೇಶ ಒದಗಿಸುವ ಚೆಕ್ ಪೋಸ್ಟ್ ಸೇರಿದಂತೆ ಅಗತ್ಯವಿರುವೆಡೆ ಸಂಚಾರಿ ಘಟಕ ತೆರೆಯಲಾಗಿದೆ. ಈ ಸ್ಥಳದಲ್ಲಿ ೦೩ ತಿಂಗಳುಗಳಿಂದ ೫ ವರ್ಷದೊಳಗಿನ ಮಕ್ಕಳು ಕಂಡುಬಂದಲ್ಲಿ ಲಸಿಕೆ ಹಾಕಿಸಲು ಸಹಕರಿಸುವಂತೆ ಮನವಿ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಸಂಚಾರಿ ಬೂತ್ ತೆರೆಯಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆಯು ಮನವಿ ಮಾಡಿದೆ.

” ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು ೩೨,೭೦೨ ಮಕ್ಕಳನ್ನು ಗುರುತಿಸಲಾಗಿದ್ದು, ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪ್ರವಾಸಿಗರ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳಿಗೂ ಲಸಿಕೆ ಹಾಕಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ೫ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಲು ಪೋಷಕರು ಸಹಕಾರ ನೀಡಬೇಕು.”

-ಡಾ.ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಹಾಡಿಗಳಲ್ಲಿ ಹೆಚ್ಚಿನ ನಿಗಾ..!:  ಹಾಡಿಗಳಲ್ಲಿ ವಾಸಿಸುತ್ತಿರುವ ಜನರು ಕಳೆದ ಸಾಲಿನಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹಾಡಿಗಳಲ್ಲಿರುವ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹಾಡಿಯ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಸೂಚನೆ ನೀಡಲಾಗಿದೆ.

ಅಗತ್ಯ ಸಹಕಾರಕ್ಕೆ ಬೆಳೆಗಾರರಲ್ಲಿ ಮನವಿ..!: 

ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮಾಡುವ ಸಮಯ ಇದಾಗಿರುವುದರಿಂದ ಕಾರ್ಮಿಕರು ಕೆಲಸಕ್ಕೆ ತೆರಳಿ, ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ತೋಟಗಳ ಮಾಲೀಕರು ತಮ್ಮ ಲೈನ್ ಮನೆಗಳಲ್ಲಿರುವ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಬೆಳೆಗಾರರ ಸಂಘದ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಅಗತ್ಯ ಸಹಕಾರ ಕೋರಲಾಗಿದೆ. ತಮ್ಮ ಮನೆಗೆ ಬರುವ ಅರೋಗ್ಯ ಕಾರ್ಯಕರ್ತರಿಗೆ ಲೈನ್‌ಮನೆಯಲ್ಲಿರುವ ೦ ಯಿಂದ ೦೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆಯೂ ಸೂಚಿಸಲಾಗಿದೆ.

Tags:
error: Content is protected !!