ಕೆ.ಬಿ.ರಮೇಶನಾಯಕ
ಜಿಲ್ಲೆಯಲ್ಲಿ ೫೪,೭೯೮ ಮಂದಿ ಮನೆ, ನಿವೇಶನ ರಹಿತ ಫಲಾನುಭವಿಗಳು
೨೦೨೪-೨೫ನೇ ಸಾಲಿನಲ್ಲಿ ೨೦,೯೦೮ ಮನೆಗಳ ನಿರ್ಮಾಣದ ಗುರಿ
ಮೈಸೂರು: ದಶಕಗಳಿಂದ ನಿವೇಶನ ಇಲ್ಲದೆ, ಗುಡಿಸಲುಗಳಲ್ಲಿ ವಾಸ ಮಾಡುವ ಫಲಾನುಭವಿಗಳಿಗೆ ಸ್ವಂತ ಸೂರು ಕಲ್ಪಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಗಳನ್ನು ಒದಗಿಸಲಾಗುತ್ತಿದ್ದು, ರಾಜ್ಯದಲ್ಲೇ ಪಿಎಂಎ ಯೋಜನೆ ಪ್ರಗತಿಯಲ್ಲಿ ಮೈಸೂರು ಜಿಲ್ಲೆ ಪ್ರಥಮ ಸ್ಥಾನವನ್ನು ಹೊಂದಿದೆ.
ಜಿಲ್ಲೆಯಲ್ಲಿ ಹೊಸದಾಗಿ ವಸತಿ ರಹಿತರು ಹಾಗೂ ನಿವೇಶನ ರಹಿತರ ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು ನಿವೇಶನ, ಮನೆ ರಹಿತ ೫೪,೭೯೮ ಫಲಾನುಭವಿಗಳಿದ್ದು, ೨೦೨೪-೨೫ನೇ ಸಾಲಿನಲ್ಲಿ ೨೦,೯೦೮ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ೨೦೧೮ರಲ್ಲಿ ವಸತಿ ರಹಿತರ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ನಡೆಸುವ ಮೂಲಕ ಅರ್ಹರ ಪಟ್ಟಿಯನ್ನು ತಯಾರಿಸಲಾಗಿತ್ತು. ಅದರಂತೆ, ಸಮೀಕ್ಷೆಯಲ್ಲಿ ಕಂಡು ಬಂದ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಜಿಲ್ಲೆಯ ಒಂಬತ್ತು ತಾಲ್ಲೂಕುಗಳಿಂದ ೫೦,೨೦೬ ವಸತಿ ರಹಿತರು, ೪,೫೯೨ ನಿವೇಶನ ರಹಿತರು ಸೇರಿದಂತೆ ಒಟ್ಟು ೫೪,೭೯೮ ಫಲಾನುಭವಿಗಳಿದ್ದಾರೆ. ಈ ಫಲಾನುಭವಿಗಳಿಗೆ ೨೦೨೪- ೨೫ನೇ ಸಾಲಿನಲ್ಲಿ ೨೦,೯೦೮ ಮನೆಗಳ ನಿರ್ಮಾಣದ ಗುರಿಯೊಂದಿಗೆ ಕಾಮಗಾರಿ ಆದೇಶ ನೀಡಲಾಗಿದೆ.
ರಾಜ್ಯದಲ್ಲೇ ಮೈಸೂರು ಪ್ರಥಮ: ಪ್ರಧಾನಮಂತ್ರಿ ಆವಾಸ್ ಯೋಜನೆ ಯಡಿ ಶೇಕಡಾವಾರು ಪ್ರಗತಿಯಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಮೂರು ತಿಂಗಳ ಒಳಗೆ ಮನೆ ನಿರ್ಮಿಸಿಕೊಂಡು ಸಹಾಯಧನವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಲಾಗಿದೆ. ಮೈಸೂರು ನಂತರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕೊಟ್ಟಿರುವ ಗುರಿಯಲ್ಲಿ ಈತನಕ ಕಾಮಗಾರಿ ಶುರು ಮಾಡಿಲ್ಲದೆ ಇರುವುದು ಕಂಡುಬಂದಿದೆ.
ಪಿಎಂಎ ಆವಾಸ್ ಯೋಜನೆಯಡಿ ವಸತಿರಹಿತ ೫೦,೨೦೬ ಫಲಾನುಭವಿಗಳಲ್ಲಿ ಮೂರು ವರ್ಷದ ಗುರಿಯನ್ನು ಇಟ್ಟು ಮನೆ ನಿರ್ಮಿಸುವ ಪ್ಲಾನ್ ಮಾಡಲಾಗಿದೆ. ಸಮೀಕ್ಷೆ ಕಾರ್ಯದ ಪಟ್ಟಿಯನ್ನು ಇಟ್ಟುಕೊಂಡು ಕಾಲಕಾಲಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಮಾಹಿತಿ ಪಡೆದು ಪ್ರತಿಯೊಬ್ಬರಿಗೂ ಸೂರು ಒದಗಿಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ. ನಂಜನಗೂಡು ತಾಲ್ಲೂಕಿನಲ್ಲಿ ಅತಿ ಹೆಚ್ಚು ೧೨,೪೯೩, ನಂತರದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ೯,೨೫೫ ಮಂದಿಗೆ ಮನೆಗಳು ಇಲ್ಲದಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಡಾ.ಡಿ.ಎಂ. ನಂಜುಂಡಪ್ಪ ಅವರ ವರದಿಯ ಆಧಾರದ ಮೇಲೆ ಎಚ್.ಡಿ.ಕೋಟೆ ತಾಲ್ಲೂಕಿಗೆ ಪ್ರಾತಿನಿಧ್ಯ ಕಲ್ಪಿಸಿಕೊಡಬೇಕೆಂಬ ಕೂಗು ಎದ್ದಿದ್ದರೂ ಈತನಕ ಮನೆಗಳ ಹಂಚಿಕೆಯಲ್ಲಿ ಕಡಿಮೆ ಗುರಿ ಕೊಡಲಾಗಿದೆ. ಹಾಗಾಗಿ,ಮುಂದೆ ಈ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಿವೇಶನ ಖರೀದಿ: ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕಿಂತಲೂ ನಿವೇಶನ ಇಲ್ಲದೆ ಇರುವವರಿಗೆ ನಿವೇಶನ ಒದಗಿಸಲು ಕಂದಾಯ ಅಥವಾ ಖಾಸಗಿ ಭೂಮಿಯನ್ನು ಖರೀದಿಸಿ ಹಂಚಿಕೆ ಮಾಡಲು ಜಿಪಂ ಮುಂದಾಗಿದೆ. ಕಂದಾಯ ಭೂಮಿ ಇರುವುದನ್ನು ಗುರುತಿಸುವಂತೆ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ಇದ್ದರೆ ಅದನ್ನು ಪರಿವರ್ತಿಸಿ ಹಂಚಿಕೆ ಮಾಡುವುದು. ಒಂದು ವೇಳೆ ಇಲ್ಲದಿದ್ದರೆ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಿ ಹೊಸ ಬಡಾವಣೆ ರಚನೆ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳಾಗಿದ್ದರೆ ಸರ್ಕಾರವೇ ನಿವೇಶನ ಖರೀದಿಸುವುದಕ್ಕೂ ಅನುದಾನ ಕೊಡುವುದರಿಂದ ಸರ್ಕಾರದ ಅನುಮೋದನೆ ಪಡೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
” ಮೈಸೂರು ಜಿಲ್ಲೆಯು ಪಿಎಂ ಆವಾಸ್ ಯೋಜನೆಯಡಿ ರಾಜ್ಯ ದಲ್ಲೇ ಪ್ರಥಮ ಸ್ಥಾನ ವನ್ನು ತಲುಪಿದೆ. ಮುಂದಿನ ದಿನಗಳಲ್ಲಿ ವಸತಿ, ನಿವೇಶನ ರಹಿತ ರಿಗೆ ಮನೆಗಳನ್ನು ಒದಗಿಸಲು ತೀರ್ಮಾನಿಸಿ ಕಂದಾಯ, ಖಾಸಗಿ ಭೂಮಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಭೂಮಿ ಸಿಕ್ಕಿದರೆ ಬಡ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು.”
-ಎಸ್.ಯುಕೇಶ್ ಕುಮಾರ್, ಜಿಪಂ ಸಿಇಒ, ಮೈಸೂರು





